ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ‘ಗಿಫ್ಟ್’ ಆಮಿಷ: ಸಿಎಂ ಕುಮಾರಸ್ವಾಮಿ

Update: 2019-01-25 13:42 GMT

ಬೆಂಗಳೂರು, ಜ. 25: ರಾಜ್ಯದಲ್ಲಿ ಆಪರೇಷನ್ ಕಮಲ ಇನ್ನೂ ನಡೆಯುತ್ತಿದ್ದು, ನಿನ್ನೆ ರಾತ್ರಿಯೂ ಕಾಂಗ್ರೆಸ್ ಶಾಸಕರೊಬ್ಬರಿಗೆ ಬಿಜೆಪಿಯಿಂದ ಆಮಿಷವೊಡ್ಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸಬಾಂಬ್ ಸಿಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರಿಗೆ ಗಿಫ್ಟ್ ಎಲ್ಲಿಗೆ ಕಳುಹಿಸಬೇಕು ಎಂದು ದೂರವಾಣಿ ಮೂಲಕ ಆಮಿಷವೊಡ್ಡಲಾಗಿದೆ. ಗಿಫ್ಟ್ ಮೊತ್ತವನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ ಎಂದು ಹೇಳಿದರು.

ಶಾಸಕರೊಬ್ಬರಿಗೆ ಬಹುದೊಡ್ಡ ಮೊತ್ತದ ಗಿಫ್ಟ್ ಆಮಿಷವೊಡ್ಡಿದ್ದು, ಅದೇನು ಸಣ್ಣ-ಪುಟ್ಟದಲ್ಲ. ಅವರಿಗೆ (ಬಿಎಸ್‌ವೈ) ಅಷ್ಟೊಂದು ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಶಾಸಕರನ್ನು ಮಾರಾಟದ ವಸ್ತುವನ್ನಾಗಿ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಅದನ್ನೇ ಮಾಡಿದ್ದಾರೆ. ಈಗಲೂ ಅವರು ಅದನ್ನು ಮುಂದುವರಿಸುತ್ತಿದ್ದು, ಅದು ಅವರಿಗೆ ಒಂದು ಚಾಳಿಯಾಗಿದೆ. ಬಿಜೆಪಿ ಆಮಿಷದ ಬಗ್ಗೆ ಖುದ್ದು ಕಾಂಗ್ರೆಸ್ ಶಾಸಕರೇ ನನಗೆ ಮಾಹಿತಿ ನೀಡಿದ್ದಾರೆ ಎಂದು ಕುಮಾರಸ್ವಾಮಿ ಬಹಿರಂಗಪಡಿಸಿದರು.

ಬಿಜೆಪಿ ಗಿಫ್ಟ್ ಆಮಿಷವನ್ನು ನಿರಾಕರಿಸಿರುವ ಕಾಂಗ್ರೆಸ್ ಶಾಸಕರು, ನಮ್ಮನ್ನು ನೆಮ್ಮದಿಯಾಗಿ ಇರಲು ಬಿಡಿ. ನಾವು ಯಾವುದೇ ಕಾರಣಕ್ಕೂ ನಿಮ್ಮ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ ಎಂದ ಕುಮಾರಸ್ವಾಮಿ, ಈ ಬಗ್ಗೆ ಶಾಸಕರ ಹೆಸರು ಮತ್ತು ಗಿಫ್ಟ್ ಆಮಿಷದ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News