×
Ad

ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ ಕರೆ

Update: 2019-01-25 19:43 IST

ಬೆಂಗಳೂರು, ಜ.25: ಭ್ರಷ್ಟಾಚಾರವೆಂಬ ಭೂತ ಸಮಾಜದ ಎಲ್ಲ ಸ್ತರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದ್ದು, ಇದನ್ನು ಹೋಗಲಾಡಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಇಂದಿಲ್ಲಿ ಕರೆ ನೀಡಿದರು.

ಶುಕ್ರವಾರ ನಗರದ ಅರಮನೆ ರಸ್ತೆಯ ನ್ಯಾಶನಲ್ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಬ್ಯಾರೀಸ್ ಗ್ರೂಪ್ ಹಾಗೂ ಐಜಿಬಿಸಿ ಬೆಂಗಳೂರು ಘಟಕ ಸಹಯೋಗದೊಂದಿಗೆ ಆಯೋಜಿಸಿದ್ದ, ಡಾ.ಪ್ರೇಮ್ ಸಿ ಜೈನ್ ಅವರ ನೆನಪು ಕುರಿತ ಉಪನ್ಯಾಸ ಮತ್ತು ಹರಿತ್ ಪ್ರೇಮ್ ಭಾರತ್ ಮಹೋತ್ಸವ-2019 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ದೇಶದ ಜನತೆ ತುಂಬಾ ನೊಂದಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಲಂಚ ಕೊಡಬೇಕಾದ ಅನಿವಾರ್ಯ ಸ್ಥಿತಿ ಬಂದಿದೆ. ಅಷ್ಟೇ ಅಲ್ಲದೆ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವುದು ಹೇಗೆ ಎಂಬುದು ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಅವರು ನುಡಿದರು.

ಸಮಾಜಕ್ಕೆ ನಾಯಸಮ್ಮತವಾದ ಬೆಲೆ ನೀಡಬೇಕಾದರೆ ಕೇವಲ ವಿದ್ಯಾಭ್ಯಾಸ ಮಾತ್ರ ಮುಖ್ಯವಲ್ಲ, ನಮ್ಮ ಉದ್ದೇಶಗಳು ಮತ್ತು ನಡುವಳಿಕೆಗಳು ಉತ್ತವಾಗಿರಬೇಕು ಎಂದ ಅವರು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗಿಗಳಾದರೆ, ಭ್ರಷ್ಟಾಚಾರ ಮುಕ್ತ ಜೀವನಕ್ಕೆ ಟೊಂಕ ಕಟ್ಟಿ ನಿಲ್ಲಬೇಕು ಎಂದು ಕರೆ ನೀಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇನ್ನು ಸಂಸತ್, ವಿಧಾನಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಗಲಾಟೆ, ಗದ್ದಲದಲ್ಲೇ ಕಾಲ ಕಳೆಯುತ್ತಾರೆ. ಇದರಿಂದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಪೋಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುಪಿಎಸ್ಸಿ, ಕೆಪಿಎಸ್ಸಿಯ ಕತೆ ಈಗ ಏನಾಗಿದೆ ಎಂದು ಪ್ರಶ್ನಿಸಿದ ಅವರು, ಕೆಪಿಎಸ್ಸಿಯ ಹಿಂದಿನ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಸಿಐಡಿ ಆರೋಪ ಪಟ್ಟಿ ಸಲ್ಲಿಸಿದೆ. ಅಲ್ಲದೆ, ಅಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.

ಡಾ.ಪ್ರೇಮ್ ಜೈನ್ ಅಗಲಿಕೆಯಿಂದ ದೇಶ ಹಸಿರು ನಿರ್ಮಾಣದ ಜನಕನನ್ನು ಕಳೆದುಕೊಂಡಿದೆ: ಸೆಯ್ಯದ್ ಬ್ಯಾರಿ

ಇದಕ್ಕೂ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೆಯ್ಯದ್ ಮುಹಮ್ಮದ್ ಬ್ಯಾರಿ, ಖ್ಯಾತ ಉದ್ಯಮಿ, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಅಧ್ಯಕ್ಷ, ದೇಶದಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ನಾಂದಿ ಹಾಡಿದ ಪ್ರೇರಕ ಶಕ್ತಿ ಎಂದೇ ಖ್ಯಾತರಾದ ಡಾ. ಪ್ರೇಮ್ ಸಿ ಜೈನ್ ಅವರ ಆಗಲಿಕೆಯಿಂದ ದೇಶ ಹಸಿರು ನಿರ್ಮಾಣದ ಜನಕನನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಡಾ.ಪ್ರೇಮ್ ಜೈನ್ ಅವರು ಹವಾನಿಯಂತ್ರಣ ತಂತ್ರಜ್ಞಾನದಲ್ಲಿ ಆಳವಾದ ಅಧ್ಯಯನ ನಡೆಸಿದವರು. ಪ್ರಥಮ ಬಾರಿಗೆ ಪರಿಸರ ಇಂಜಿಯರಿಂಗ್ ಪ್ರಯೋಗಾಲಯವನ್ನು ಸ್ಥಾಪಿಸಿದ ಕೀರ್ತಿ ಅವರದ್ದು. ಅಲ್ಲದೆ, ಉದ್ಯಮಿಯಾಗಿ ಯಶಸ್ಸು ಕಂಡ ಅವರು, ಹಲವು ಸಾಧನೆಗಳ ಮೂಲಕ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಐಜಿಬಿಸಿ (ಕೌಶಲ್ಯಾಭಿವೃದ್ಧಿ) ಅಧ್ಯಕ್ಷ ಕೆ.ಶ್ರೀರಾಮ್, ಪ್ರೇಮ್ ಜೈನ್ ಮೆಮೋರಿಯಲ್ ಟ್ರಸ್ಟಿ ಪಾಯಲ್ ಜೈನ್, ಐಜಿಬಿಸಿ ಬೆಂಗಳೂರು ಬೆಂಗಳೂರು ಘಟಕದ ಡಾ.ಚಂದ್ರಶೇಖರ್ ಹರಿಹರನ್, ಅಲೋಕ್ ಶೆಟ್ಟಿ ಸೇರಿ ದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News