ರಸ್ತೆ ಮಧ್ಯೆ ಕೆಟ್ಟು ನಿಂತ ಟ್ರಕ್: 15 ಕಿಮೀ ವರೆಗೂ ವಾಹನ ದಟ್ಟಣೆ-ಪ್ರಯಾಣಿಕರ ಪರದಾಟ
ಬೆಂಗಳೂರು, ಜ.25: ನಗರದ ಹೊಸೂರು ರಸ್ತೆಯಲ್ಲಿ ವಾಹನವೊಂದು ಕೆಟ್ಟುನಿಂತ ಪರಿಣಾಮ ಸುಮಾರು 15 ಕಿಮೀ ಉದ್ದ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ಎಲೆಕ್ಟ್ರಾನಿಕ್‌ಸಿಟಿ ಬಳಿಯ ಕೋನಪ್ಪನ ಅಗ್ರಹಾರದ ರಸ್ತೆ ಮಧ್ಯದಲ್ಲಿ ಬೆಳಗ್ಗೆ 7.30ರ ಸುಮಾರಿನಲ್ಲಿ ಟ್ರಕ್‌ವೊಂದು ಕೆಟ್ಟು ನಿಂತಿತು. ಇದರ ಪರಿಣಾಮ ಹಿಂಬದಿಯ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಈ ವಾಹನ ದಟ್ಟಣೆಯಲ್ಲಿ ಬಿಎಂಟಿಸಿ ಬಸ್‌ಗಳು ಸಿಲುಕಿ, ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಕೆಲಸಗಳಿಗೆ ಹೋಗಲು ಸಾಧ್ಯವಾಗದೆ ಸಮಸ್ಯೆ ಎದುರಿಸುವಂತಾಯಿತು.
ಹೊಸೂರು ರಸ್ತೆಯಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಘಟನೆಗಳು ಸಂಭವಿಸಿ, ಟ್ರಾಫಿಕ್ ಜಾಮ್ ನಿರ್ಮಾಣವಾಗುತ್ತದೆ. ಇದಕ್ಕೆ ಸೂಕ್ತ ಪರಿಹಾರ ಹುಡುಕುವಲ್ಲಿ ಸಂಚಾರಿ ಪೊಲೀಸರು ವಿಫಲರಾಗಿದ್ದಾರೆ. ಪ್ರಯಾಣಿಕರು ಮಾತ್ರ ನಿತ್ಯವು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡರು.