ವಿವಿ ಪ್ಯಾಟ್‌ನಿಂದ ಚುನಾವಣಾ ಪ್ರಕ್ರಿಯೆಯ ಮೇಲೆ ವಿಶ್ವಾಸ ಹೆಚ್ಚಿದೆ: ರಾಜ್ಯಪಾಲ ವಜುಭಾಯಿ ವಾಲಾ

Update: 2019-01-25 16:52 GMT

ಬೆಂಗಳೂರು, ಜ.25: ಮತಯಂತ್ರಗಳಲ್ಲಿ ವಿವಿ ಪ್ಯಾಟ್ ಅಳವಡಿಸಿರುವುದರಿಂದ ಮತದಾರರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಮೂಡುವಂತೆ ಮಾಡಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಶುಕ್ರವಾರ ನಗರದ ಪುರಭವನದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಜಾರಿಯಲ್ಲಿದ್ದ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ಸಾಕಷ್ಟು ಸಂಶಯಗಳು ಉಂಟಾಗುತ್ತಿತ್ತು. ಆದರೆ, ವಿವಿ ಪ್ಯಾಟ್ ಬಂದ ನಂತರ ಮತದಾನದ ಬಗ್ಗೆ ಇದ್ದ ಎಲ್ಲಾ ಸಂಶಯಗಳು ದೂರವಾಗಿದ್ದು, ಜನತೆಯಲ್ಲಿ ವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು. ಮತದಾನವನ್ನು ರಾಷ್ಟ್ರೀಯ ಸೇವೆ ಎಂದು ಪರಿಗಣಿಸುವ ಮೂಲಕ ದೇಶವನ್ನು ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕಿದೆ. ಮತದಾನದಲ್ಲಿ ಪಾಲ್ಗೊಳ್ಳುವುದು ಪ್ರತಿ ಮತದಾರರ ಕರ್ತವ್ಯ. ಈ ನಿಟ್ಟಿನಲ್ಲಿ ಯುವಜನತೆ ಮತದಾನವನ್ನು ರಾಷ್ಟ್ರಸೇವೆಯೆಂದು ಪರಿಗಣಿಸಿ, ತಮ್ಮ ಮನೆಯ, ಅಕ್ಕಪಕ್ಕದ ಮನೆಯವರಿಗೆ ಮತದಾನದ ಬಗ್ಗೆ ಮನವರಿಕೆ ಮಾಡುವ ಮೂಲಕ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕಿದೆ ಎಂದು ಅವರು ಆಶಿಸಿದರು.

ಪ್ರಜಾಪ್ರಭುತ್ವದಲ್ಲಿ ಮತದಾನ ಎಂಬುದು ಮತದಾರರ ಹಕ್ಕು ಇದ್ದಂತೆ. ತಮ್ಮ ಮತವನ್ನು ವಿವೇಕಯುತವಾಗಿ ಚಲಾಯಿಸುವ ಮೂಲಕ ರಾಷ್ಟ್ರವನ್ನು ಸಬಲೀಕರಣ ಗೊಳಿಸಬೇಕು ಎಂದು ಹೇಳಿದ ಅವರು, ಚುನಾವಣಾ ಕಣದಲ್ಲಿ ಇಬ್ಬರು ಕೆಟ್ಟವರು ಇದ್ದರೆ, ಅವರಿಬ್ಬರಲ್ಲಿ ಯಾರು ಕನಿಷ್ಠ ಕೆಟ್ಟವರು ಎಂಬುದನ್ನು ಗುರುತಿಸಿ ಅಂತಹವರಿಗೆ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಚುನಾವಣಾ ಆಯೋಗದ ಅಪರ ಚುನಾವಣಾಧಿಕಾರಿ ಕೆ.ಎನ್.ಅಜಯ ನಾಗಭೂಷಣ್ ಮಾತನಾಡಿ, ಚುನಾವಣಾ ಆಯೋಗದ ಅಧಿಕೃತ ವರದಿಯಂತೆ 5 ಕೋಟಿ 3 ಲಕ್ಷ ಮತದಾರರು ನೋಂದಣಿಯಾಗಿದ್ದಾರೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬುದು ಈ ಬಾರಿಯ ಧ್ಯೇಯ ವಾಕ್ಯವಾಗಿದೆ ಎಂದು ತಿಳಿಸಿದರು.

ಪ್ರತಿ ನಾಗರಿಕರು ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋದಣಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಆಗಿರುವ ಲೋಪವನ್ನು ಸರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ ಚುನಾವಣಾ ಅಧಿಕಾರಿಗಳಿಗೆ ಬಹುಮಾನ ನೀಡಲಾಯಿತು. ಹಾಗೂ ಯುವ ಮತದಾರರು, ವಿಕಲಚೇತನ ಹಾಗೂ ಆದಿವಾಸಿ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.

ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರುಗಳು ಇದೆಯೋ, ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು 1950ಕ್ಕೆ ಕರೆ ಮಾಡಬಹುದು. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಮುಂದೆ ಏನು ಮಾಡಬೇಕು ಎಂಬ ಅಗತ್ಯ ಮಾಹಿತಿಯನ್ನು ಕರೆ ಮಾಡಿದ ವ್ಯಕ್ತಿಗೆ ಚುನಾವಣಾ ಸಿಬ್ಬಂದಿಗಳು ನೀಡಲಿದ್ದಾರೆ.

-ಕೆ.ಎನ್.ಅಜಯ ನಾಗಭೂಷಣ್, ಅಪರ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News