ಪ್ರಿಯಾಂಕಾ ಗಾಂಧಿ ಆಗಮನದಿಂದ ದೇಶದಲ್ಲಿ ಕಾಂಗ್ರೆಸ್‌ನ ಅಲೆ ಸೃಷ್ಟಿ: ಈಶ್ವರ್ ಖಂಡ್ರೆ

Update: 2019-01-25 16:55 GMT

ಬೆಂಗಳೂರು, ಜ.25: ಪ್ರಿಯಾಂಕಾ ಗಾಂಧಿ ಆಗಮನದಿಂದ ದೇಶದಲ್ಲಿ ಕಾಂಗ್ರೆಸ್‌ನ ಅಲೆ ಸೃಷ್ಟಿಯಾಗಿದ್ದು, ಪ್ರಿಯಾಂಕಾ ಗಾಂಧಿ ಪಕ್ಷದ ಅಧ್ಯಕ್ಷರಾದ ನಂತರ ಆ ಅಲೆ ಸುನಾಮಿಯಾಗಿ ಪರಿವರ್ತನೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಶುಕ್ರವಾರ ನಗರದ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಕಚೇರಿ ಎದುರು ಆಯೋಜಿಸಲಾಗಿದ್ದ ಕಡ್ಡಾಯ ಮತದಾನ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಪ್ರಿಯಾಂಕಾ ಗಾಂಧಿ ಆಗಮನದಿಂದ ದೇಶದ ರಾಜಕೀಯದಲ್ಲಿ ಪರಿವರ್ತನೆಯ ಪರ್ವ ಪ್ರಾರಂಭವಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ಚುನಾವಣೆಗಳೇ ಪ್ರಜಾಪ್ರಭುತ್ವದ ಬುನಾದಿ. ದೇಶದಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ. ಮತದಾರರು ಮತದಾನವನ್ನು ಚಲಾಯಿಸಿ, ತಮ್ಮ ಅನಿಸಿಕೆಗೆ ಪೂರಕವಾದ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ನುಡಿದರು.

ಈಗಾಗಲೇ ಎಲ್ಲ ಕಡೆ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಇಲ್ಲದೇ ಇದ್ದರೆ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅಲ್ಲದೆ, ಮನೆಯಲ್ಲಿರುವ ಮಹಿಳೆಯರು ಮತದಾನದ ಬಗ್ಗೆ ಅಕ್ಕ-ಪಕ್ಕದವರಿಗೆ ಜಾಗೃತಿ ಮೂಡಿಸಬೇಕು. ತಾವು ಖುದ್ದಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕು ಎಂದರು.

ಕೆಪಿಸಿಸಿ ಕಚೇರಿಯಿಂದ ಇಂಡಿಯನ್ ಎಕ್ಸ್‌ಪ್ರೆಸ್‌ವರೆಗೂ ನಡೆದ ರ್ಯಾಲಿಯಲ್ಲಿ ಜಮಾಯಿಸಿದ್ದ ಸಾರ್ವಜನಿಕರಿಗೆ ಪೆನ್ನು ನೀಡುವ ಮೂಲಕ ಅರಿವು ಮೂಡಿಸಲಾಯಿತು. ಇನ್ನು ರ್ಯಾಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಶಾಸಕ ರೋಷನ್ ಬೇಗ್, ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳು ಹಾಜರಿದ್ದರು.

ಚುನಾವಣೆಯಲ್ಲಿ ಎಲ್ಲರೂ ಪಾಲ್ಗೊಂಡು ಶೇ.100ಕ್ಕೆ 100 ರಷ್ಟು ಮತದಾನ ಮಾಡಿದಾಗ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಲು ಸಾಧ್ಯ.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News