ಚುನಾವಣಾ ಪ್ರಣಾಳಿಕೆ ಜನರ ಧ್ವನಿಯಾಗಿರಬೇಕು: ನಟ ಪ್ರಕಾಶ್ ರೈ

Update: 2019-01-25 16:57 GMT

ಬೆಂಗಳೂರು, ಜ.25: ಚುನಾವಣೆ ಸಂದರ್ಭದಲ್ಲಿ ಪ್ರಕಟಿಸುವ ಪ್ರಣಾಳಿಕೆಗಳು ಜನರ ಧ್ವನಿಯಾಗಿರಬೇಕು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಹಿರಿಯ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಶಿವಾಜಿನಗರದ ಜಯಮಹಲ್ ಹಾಗೂ ಶಿವಾಜಿನಗರ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಜನರ ಸೇವೆಗಾಗಿ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದೇನೆ. ನನ್ನ ಹೋರಾಟ ವೈಯಕ್ತಿಕವಾಗಿ ಯಾರ ವಿರುದ್ಧವೂ ಅಲ್ಲ. ಜಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರ ಕೂಗು ಆಳುವ ವರ್ಗಕ್ಕೆ ಕೇಳಿಸುತ್ತಿಲ್ಲ ಎಂದು ಅವರು ಹೇಳಿದರು.

ಆದುದರಿಂದ, ನಾನು ಸ್ಪರ್ಧಿಸಲು ಬಯಸಿರುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಈ ಮನೆ ಮನೆಗೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ ಎಂದು ಪ್ರಕಾಶ್ ರೈ ತಿಳಿಸಿದರು.

‘ಮತದಾನ ಮಾಡಿ ಮನೆಗೆ ಹೋಗಿದ್ದು ಸಾಕು, ಇನ್ನು ಸಂಸತ್ತಿಗೆ ಹೋಗೋಣ’ ಎಂಬ ಘೋಷ ವಾಕ್ಯದೊಂದಿಗೆ ಜನ ಸಾಮಾನ್ಯರ ಪ್ರತಿನಿಧಿಯಾಗಿ ಸಂಸತ್ತು ಪ್ರವೇಶಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರೈ, ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ ಶಾಲೆ, ಕಾಲೇಜು ಶಿಕ್ಷಣವನ್ನು ಪಡೆದಿದ್ದು ಬೆಂಗಳೂರಿನಲ್ಲಿ, ಚಲನಚಿತ್ರ ರಂಗದ ಕಾರ್ಯಕ್ಷೇತ್ರವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಆದುದರಿಂದ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News