ಬೆಂಗಳೂರು: ವ್ಯಕ್ತಿಗೆ ಚಾಕು ಇರಿದು ಕೊಲೆ
Update: 2019-01-25 22:53 IST
ಬೆಂಗಳೂರು, ಜ.25: ವ್ಯಕ್ತಿಯೋರ್ವನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದುರ್ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.
ಎನ್‌ಜಿಇಎಫ್ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಹಾಸನ ಮೂಲದ ರಘು (27) ಕೊಲೆಗೀಡಾಗಿರುವ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.
ಹಾಸನದಿಂದ ಬೆಂಗಳೂರಿಗೆ ಬಂದು ಆಟೊ ಚಾಲನೆ ವೃತ್ತಿಯಲ್ಲೇ ಜೀವನ ಸಾಗುತ್ತಿದ್ದ ರಘು, ಗುರುವಾರ ತಡರಾತ್ರಿ ಆಟೊದಲ್ಲಿ ತನ್ನ ಗೆಳೆಯರನ್ನು ಭೇಟಿ ಮಾಡಲು ಬಳಿ ತೆರಳಿದ್ದ. ಇದೇ ವೇಳೆ, ಮದ್ಯದಂಗಡಿಯಿಂದ ಹೊರ ಬಂದ ಇಬ್ಬರು ದುಷ್ಕರ್ಮಿಗಳು, ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ರಘು ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ರಘು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿಂತೆ ಜ್ಞಾನಭಾರತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.