ಹಸಿರು ಮಾರ್ಗದಲ್ಲಿ ಮೆಟ್ರೋ ಆರು ಬೋಗಿಗಳ ರೈಲು ಮರೀಚಿಕೆ

Update: 2019-01-25 17:35 GMT

ಬೆಂಗಳೂರು, ಜ.25: ನಾಗಸಂದ್ರದಿಂದ ಯಲಚೇನಹಳ್ಳಿಯ ಹಸಿರು ಮಾರ್ಗದಲ್ಲಿ 2018 ರ ಡಿಸೆಂಬರ್ ಅಂತ್ಯದ ವೇಳೆಗೆ ಆರು ಬೋಗಿಗಳ ಮೆಟ್ರೋ ರೈಲು ಸೇವೆ ನೀಡಲಾಗುತ್ತದೆ ಎಂದು ಹೇಳಿದ್ದರೂ, ಹಸಿರು ಮಾರ್ಗದ ಪ್ರಯಾಣಿಕರಿಗೆ ಈಗಲೂ ಮರೀಚಿಕೆ ಆಗಿದೆ.

2018ರ ಡಿಸೆಂಬರ್ ವೇಳೆಗೆ ಹಸಿರು ಮಾರ್ಗದ ಪ್ರಯಾಣಿಕರಿಗೆ ಆರು ಬೋಗಿಗಳ ಮೆಟ್ರೋ ರೈಲು ಸೇವೆ ನೀಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದರು. ಆದರೆ, 2019 ರ ಜನವರಿ ಮುಗಿಯುತ್ತಿದ್ದರೂ ಪರೀಕ್ಷಾರ್ಥ ಸಂಚಾರವೇ ನಡೆಯುತ್ತಿದೆ. ಪರಿಣಾಮ ಜನರಿಗೆ ಈ ಸೇವೆ ಲಭ್ಯವಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

ಹಸಿರು ಮಾರ್ಗದಲ್ಲಿ ಫೀಕ್ ಅವರ್‌ನಲ್ಲಿ (ಬೆಳಗ್ಗೆ 8.30ರಿಂದ 10.30 ಹಾಗೂ ಸಂಜೆ 4.30ರಿಂದ 6.30) ಒಂದು ಗಂಟೆಗೆ ಸರಾಸರಿ 10 ಸಾವಿರ ಮಂದಿ ಸಂಚರಿಸುತ್ತಾರೆ. ಆದರೆ, ನೇರಳೆ ಮಾರ್ಗದಲ್ಲಿ 19 ಸಾವಿರಕ್ಕೂ ಅಧಿಕ ಮಂದಿ ಸಂಚರಿಸುತ್ತಾರೆ. ಹೀಗಾಗಿ, ನೇರಳೆ ಮಾರ್ಗಕ್ಕೆ ಪ್ರಥಮ ಆದ್ಯತೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಹಸಿರು ಮಾರ್ಗದಲ್ಲಿ ರೈಲುಗಳು ಭರ್ತಿ ಆಗುತ್ತಿವೆ. ರೈಲಿನೊಳಗೆ ಕಾಲಿಡಲೂ ಸ್ಥಳ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸೇವೆಗೆ ನಿಗಮವು ಹಿಂದೇಟು ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಯಾಣಿಕರು ಕೇಳುತ್ತಿದ್ದಾರೆ.

ಆರು ಬೋಗಿಯ ಎರಡು ರೈಲುಗಳು ತಿಂಗಳುಗಳಿಂದ ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದು, ಈ ಪೈಕಿ ಒಂದು ರೈಲು ಹಸಿರು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡುತ್ತಿದೆ. ಪ್ರಸ್ತುತ ಆರು ಬೋಗಿಗಳ ಮೂರು ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಪರೀಕ್ಷಾರ್ಥ ಸಂಚರಿಸುತ್ತಿರುವ ರೈಲುಗಳು ಶೀಘ್ರ ವಾಣಿಜ್ಯ ಸಂಚಾರ ಆರಂಭಿಸಲಿವೆ. ಜನವರಿ ಅಂತ್ಯದೊಳಗೆ ಸೇವೆಗೆ ಅಣಿಗೊಳಿಸುವ ಚಿಂತನೆಯೂ ಇದೆ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News