ಕೆಎಸ್ಸಾರ್ಟಿಸಿ ನೌಕರರ ಸಂಘದಲ್ಲಿ ಭ್ರಷ್ಟಾಚಾರ ನಡೆದಿಲ್ಲ: ಜಿ.ಎ.ಮಂಜುನಾಥ್

Update: 2019-01-25 17:43 GMT

ಬೆಂಗಳೂರು, ಜ.25: ಕೆಎಸ್ಸಾರ್ಟಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದ್ದು, ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಎ.ಮಂಜುನಾಥ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸುವವರು ನೇರ ಚರ್ಚೆಗೆ ಬರಬಹುದು. 2005ರಿಂದ 2007ರವರೆ ಕೆಎಸ್ಸಾರ್ಟಿಸಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಾನು ಭ್ರಷ್ಟಾಚಾರ ರಹಿತವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಸೂಕ್ತ ದಾಖಲೆಗಳೂ ಇವೆ. ಸುಖಾಸುಮ್ಮನೆ ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

2007ರಲ್ಲಿ ಕೆಎಸ್ಸಾರ್ಟಿಸಿ ಸೊಸೈಟಿ ಬೋರ್ಡ್, ರಾಜ್ಯ ಸರಕಾರ ಹಾಗೂ ನೆಲಮಂಗಲ ಹೌಸಿಂಗ್ ಬೋರ್ಡ್ ಅನುಮತಿ ಮೇರೆಗೆ ಕರಾರು ಮಾಡಿಕೊಂಡು 110 ಎಕರೆ ಪ್ರದೇಶದಲ್ಲಿ ಸಾರಿಗೆ ನಗರ ಬಡಾವಣೆ ಅಭಿವೃದ್ಧಿ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಕೆಎಸ್ಸಾರ್ಟಿಸಿ ಹೌಸಿಂಗ್ ಸೊಸೈಟಿಯ ಸಾರಿಗೆ ನಗರ ಬಡಾವಣೆಯಲ್ಲಿ ನಿವೇಶನ ಪಡೆಯಲು 930 ಮಂದಿ ಸದಸ್ಯರ ಪೈಕಿ 580 ಸದಸ್ಯರು ಸಂಪೂರ್ಣ ಹಣ ನೀಡಿದ್ದರು. ಉಳಿದವರು ಅಡ್ವಾನ್ಸ್ ಹಣ ಕಟ್ಟಿದ್ದರು ಎಂದು ತಿಳಿಸಿದರು.

ಒಟ್ಟಾರೆ 110 ಎಕರೆಯಲ್ಲಿ 72 ಎಕರೆ ಮಾತ್ರ ವರ್ಗಾವಣೆಯಾಗಿದೆ. ಈ ವ್ಯವಹಾರದಲ್ಲಿ ಅಡಳಿತ ಮಂಡಳಿ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದೆ ಲಾಬಿ ನಡೆದಿಲ್ಲ. ಈ ಯೋಜನೆ ಕಾರಣಾಂತರದಿಂದ ಯಶಸ್ವಿಯಾಗಿ ಅನುಷ್ಠಾನಗೊಳ್ಳಲಿಲ್ಲ. ನೌಕರರ ಹಣಕ್ಕೆ ಯಾವುದೇ ಮೋಸವಾಗುವುದಿಲ್ಲ. ನೆಲಮಂಗಲ ಯೋಜನಾ ಪ್ರಾಧಿಕಾರ ನಿವೇಶನಗಳನ್ನು ಬಿಡುಗಡೆ ಮಾಡಿದೆ. ಆದರೆ ಇನ್ನೂ ಖಾತಾ ಮಾಡಿಕೊಟ್ಟಿಲ್ಲ. ಈ ಯೋಜನೆ ಅನುಷ್ಠಾನಗೊಳ್ಳದಿರಲು ಈಗಿನ ಆಡಳಿತ ಮಂಡಳಿ ನಿರ್ಲಕ್ಷ್ಯ ಕಾರಣ ಎಂದು ದೂರಿದರು.

ಕೆಎಸ್‌ಆರ್‌ಟಿಸಿ ನೌಕರರ ಪತ್ತಿನ ಸಹಕಾರ ಸಂಘದ ಚುನಾವಣೆ ಜ.27ರಂದು ಜರುಗಲಿದೆ. ಈ ಚುನಾವಣೆಯಲ್ಲಿ ನಾನೂ ಸ್ಪರ್ಧಿಸಿದ್ದೇನೆ. ಈ ಹಿನ್ನೆಲೆ ಪ್ರತಿಸ್ಪರ್ಧಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಹೀಗೆ ಆರೋಪಗಳನ್ನು ಮಾಡುತ್ತಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News