×
Ad

ಬೆಂಗಳೂರು ನಗರದಾದ್ಯಂತ ಉಲ್ಬಣಿಸಿದ ಕಸ ವಿಲೇವಾರಿ ಸಮಸ್ಯೆ

Update: 2019-01-25 23:19 IST

ಬೆಂಗಳೂರು, ಜ.25: ರಾಜಧಾನಿಯಲ್ಲಿ ಮೂರು ದಿನಗಳಿಂದ ಕಸ ವಿಲೇವಾರಿಯಾಗದೆ ಕಸ ತುಂಬಿದ ಲಾರಿಗಳು ಎಲ್ಲೆಂದರಲ್ಲಿ ನಿಂತಿದ್ದು, ನಗರದಾದ್ಯಂತ ಕಸ ವಿಲೇವಾರಿ ಸಮಸ್ಯೆ ಉಲ್ಬಣಿಸುತ್ತಿದೆ.

ಬೆಳ್ಳಳ್ಳಿ ಕೋರೆಯಲ್ಲಿ ಕಸ ಹಾಕಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ನಗರದಲ್ಲಿ ಮೂರು ದಿನಗಳಿಂದ ಕಸ ವಿಲೇವಾರಿಯಾಗಿಲ್ಲ. ಕಸ ತುಂಬಿದ ಲಾರಿಗಳು ಎಲ್ಲೆಂದರಲ್ಲಿ ನಿಂತಿದ್ದು, ನಗರದಾದ್ಯಂತ ಗಬ್ಬು ನಾರುತ್ತಿದೆ. ಅಲ್ಲದೆ, ಕೆಲ ವರ್ಷಗಳ ಹಿಂದೆ ಕಸದ ಅಸಮರ್ಪಕ ವಿಲೇವಾರಿಯಿಂದ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ಪಡೆದಿದ್ದ ಬಿಬಿಎಂಪಿ ಕಸದ ಸಮಸ್ಯೆ ನಿವಾರಣೆಗೆ ಪೌರ ಕಾರ್ಮಿಕರಿಂದ ಹಿಡಿದು ಬಿಬಿಎಂಪಿಯ ಎಲ್ಲ ಅಧಿಕಾರಿಗಳು ಶ್ರಮವಹಿಸಿದ್ದರು. ಆದರೆ, ಈಗ ಸಮಸ್ಯೆ ಶುರುವಾಗಿ ಮೂರು ದಿನಗಳಾದರೂ ಬಿಬಿಎಂಪಿ ಅಧಿಕಾರಿಗಳು ಕಣ್ಣು ಬಿಟ್ಟಿಲ್ಲ.

ಕಸದ ಸಮಸ್ಯೆ ತೀವ್ರಗೊಂಡ ಹಿನ್ನಲೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಬಿಬಿಎಂಪಿ ಆಯುಕ್ತರು ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಸದ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು, ಪರಿಸ್ಥಿತಿ ಕೈ ಮೀರುವ ಮುನ್ನವೇ ಮೇಯರ್, ಉಪಮೇಯರ್ ಬೆಳ್ಳಳ್ಳಿ ಕೋರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ಳಳ್ಳಿ ಕೋರೆಯಲ್ಲಿ ಕಸ ವಿಲೇವಾರಿ ಸಂಬಂಧ ಘನತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತ ಸರ್ಫ್ರಾಜ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ನಗರದ ಮಾನ ಮತ್ತೊಮ್ಮೆ ಹರಾಜಾಗುವುದರಲ್ಲಿ ಅನುಮಾನವಿಲ್ಲ ಎಂದು ನಾಗರಿಕರು ದೂರತೊಡಗಿದ್ದಾರೆ.

ಗಬ್ಬು ನಾರಲು ಶುರುವಾದ ರಾಜಧಾನಿ: ಶಿವಾನಂದ ಸರ್ಕಲ್, ಮಲ್ಲೇಶ್ವರ, ಗಾಂಧಿನಗರ, ಶ್ರೀ ರಾಮಪುರ ಸೇರಿದಂತೆ ನಗರದ ಹಲವೆಡೆ ಮನೆಗಳಿಂದ ತಂದ ಕಸ ರಸ್ತೆಗಳ ಮಧ್ಯೆಯೇ ಇದ್ದು, ಗಲ್ಲಿ-ಗಲ್ಲಿಗಳು ಗಬ್ಬು ನಾರಲು ಶುರುವಾಗಿದೆ. ಕಸದ ಅಸಮರ್ಪಕ ವಿಲೇವಾರಿಯಿಂದ ಪಾಲಿಕೆ ವಿಶ್ವ ಮಟ್ಟದಲ್ಲಿ ಅಪಖ್ಯಾತಿ ಪಡೆದಿತ್ತು. ಮಾಧ್ಯಮಗಳಲ್ಲಿ ಐಟಿ ಸಿಟಿ ಗಾರ್ಬೇಜ್ ಸಿಟಿ ಎಂದು ವರದಿ ಪ್ರಸಾರವಾಗಿದ್ದವು. ಆದರೂ, ಬಿಬಿಎಂಪಿ ಎಚ್ಚೆತ್ತುಕೊಳ್ಳಲಿಲ್ಲ.

ಸಮಸ್ಯೆ ಮುಚ್ಚಿಟ್ಟ ಅಧಿಕಾರಿಗಳು: ನಗರದಲ್ಲಿ ದಿನಕ್ಕೆ ಸಾವಿರಾರು ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಬಿಬಿಎಂಪಿ ಬೆಳ್ಳಳ್ಳಿ ಕೋರೆ ಸೇರಿ 7 ಕೋರೆಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಬೆಳ್ಳಳ್ಳಿ ಕೋರೆ ದೊಡ್ಡದಿದ್ದು, ಇಲ್ಲಿ ಕಸ ಹಾಕಲು ವಿರೋಧ ವ್ಯಕ್ತವಾಗಿದೆ. ಕಸ ಸಾಗಣೆಯ ಲಾರಿಗಳು ನಿಂತಿದ್ದರೂ, ಪಾಲಿಕೆ ಅಧಿಕಾರಿಗಳು ಈ ವಿಚಾರ ಮುಚ್ಚಿಟ್ಟಿದ್ದರಿಂದ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.

ಹೊರವಲಯದ ಗಣಿ ಹೊಂಡಗಳು: ಆನೇಕಲ್ ಬಳಿಯ ಹುಲ್ಲಹಳ್ಳಿ ಮತ್ತು ನೆಲಮಂಗಲ ಬಳಿ ಮಾರೇನಹಳ್ಳಿ ಬಿಬಿಎಂಪಿ ಅಧಿಕಾರಿಗಳು ಜಾಗ ಗುರುತಿಸಿದ್ದಾರೆ. ಅದರಂತೆ ಹುಲ್ಲಹಳ್ಳಿಯಲ್ಲಿ 10 ಎಕರೆ ಮತ್ತು ಮಾರೇನಹಳ್ಳಿಯಲ್ಲಿ 12 ಎಕರೆ ಸ್ಥಗಿತವಾಗಿರುವ ಕಲ್ಲು ಗಣಿಗಾರಿಕೆ ಜಾಗವಿದೆ. ಅಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ಧರಿಸಲಾಗಿದೆ.

ಬಿಬಿಎಂಪಿ ಗುರುತಿಸಿರುವ ಗಣಿಹೊಂಡದಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಲು ಇನ್ನೆರಡು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ನಂತರ ದುರ್ವಾಸನೆ ಬರದಂತೆ ತಡೆಯಬೇಕಿದೆ. 

ಕಸದ ಸಮಸ್ಯೆ ಪರಿಹಾರಕ್ಕೆ ಆಯುಕ್ತರು ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮ ವಹಿಸುತ್ತೇವೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News