ಸದಾಶಿವ ವರದಿ ಶಿಫಾರಸ್ಸಿಗೆ ಆಗ್ರಹಿಸಿ ಕರಾಳ ರಾತ್ರಿ ಪ್ರತಿಭಟನೆ

Update: 2019-01-25 17:50 GMT

ಬೆಂಗಳೂರು, ಜ.25: ಸದಾಶಿವ ಆಯೋಗದ ವರದಿ ಶಿಫಾರಸ್ಸಿಗಾಗಿ ಆಗ್ರಹಿಸಿ ಮಾದಿಗ ದಂಡೋರ ಸಂಘಟನೆಯ ಕಾರ್ಯಕರ್ತರು ನಗರದ ಪುರಭವನದ ಮುಂಭಾಗ ಆದಿಮಾನವ ಕರಾಳ ರಾತ್ರಿ ಪ್ರತಿಭಟನೆ ನಡೆಸಿದರು. 

ಗುರುವಾರ ರಾತ್ರಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಸ್.ರಾಮಕೃಷ್ಣ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ನಮಗಾಗಿ ಒದಗಿಸಿದ ಮೀಸಲಾತಿ ನ್ಯಾಯಯುತವಾಗಿ ಸಿಗುತ್ತಿಲ್ಲ. ಹೀಗಾಗಿ ನಿವೃತ್ತ ನ್ಯಾ.ಸದಾಶಿವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸರಕಾರಕ್ಕೆ ವರದಿ ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಕೂಡಲೆ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ದಲಿತರಿಗೆ ನೀಡುವಂತಹ ಡಿ ಗ್ರೂಪಿನ ಶೇ.100ರಷ್ಟು ಉದ್ಯೋಗವನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಶಿಕ್ಷಣ ಮೀಸಲಾತಿಯಲ್ಲಿ ಎಲ್ಲವೂ ಕೂಡ ಖಾಸಗಿಯವರ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಸರಕಾರ ದಲಿತರ ಪರವಾಗಿ ನಿಲ್ಲಬೇಕು. ದಲಿತರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿರುವ ನ್ಯಾ.ಸದಾಶಿವ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ಎಸ್.ರಾಮಕೃಷ್ಣ ಹೇಳಿದರು.

ನ್ಯಾ.ಎ.ಜೆ.ಸದಾಶಿವ ಆಯೋಗ ಏಳೂವರೆ ವರ್ಷ ಮಾದಿಗರ ಮತ್ತು ಪರಿಶಿಷ್ಟ ಜಾತಿಗಳ ಕುರಿತು ಸಮಗ್ರವಾಗಿ ಸಮೀಕ್ಷೆ ಮಾಡಿ 2012ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹಾಗೂ ಈ ವರದಿಯು 12 ಬಾರಿ ಸಚಿವ ಸಂಪುಟಕ್ಕೆ ಬಂದು ಅನುಮೋದನೆ ಮಾಡಲಿಲ್ಲ. ಈ ಬಗ್ಗೆ ಮಾದಿಗ ಸಮುದಾಯಕ್ಕೆ ಮಾಡುವ ಅವಮಾನವಾಗಿದೆ. ಈಗಲಾದರು ವರದಿಯನ್ನು ಶಿಫಾರಸು ಮಾಡಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾದಿಗ ದಂಡೋರದ ಅಧ್ಯಕ್ಷ ನರಸಪ್ಪ ದಂಡೋರ, ಕರ್ನಾಟಕ ಉಸ್ತುವಾರಿ ಕೋಲಾ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ನರಸಿಂಹ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News