ಗೀತಾವಿಷ್ಣು ಪ್ರಕರಣ: ಪರಾರಿ ಆಗಲು ಸಹಕರಿಸಿದ ವೈದ್ಯರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರು, ಜ.25: ಉದ್ಯಮಿ ದಿ.ಆದಿಕೇಶವಲು ಮೊಮ್ಮಗ ಗೀತಾವಿಷ್ಣು ಅವರ ಅಪಘಾತ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಒಂದನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಉದ್ಯಮಿ ಪುತ್ರ ಗೀತಾವಿಷ್ಣು ಆಸ್ಪತ್ರೆಯಿಂದ ಪರಾರಿ ಆಗಲು ಸಹಾಯ ಮಾಡಿದ್ದು, ಆರೋಪಿಯ ಸಹೋದರಿ ಚೈತನ್ಯಾ ಮತ್ತು ಡಾ.ರಾಜೇಶ್ ನಾಯ್ಡು ಎಂದು ಸಿಸಿಬಿ ತನಿಖಾಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. 2017ರ ಸಾಲಿನಲ್ಲಿ ಗೀತಾವಿಷ್ಣು ಒಡೆತನದ ಜಯನಗರದ ಸಭಾಂಗಣವೊಂದರಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ, ಉದ್ಯಮಿ ಪುತ್ರ ಗೀತಾವಿಷ್ಣು, ನಟ ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಸೇರಿ ಪ್ರಮುಖರಿದ್ದರು. ಅಂದು ಆದಿನಾರಾಯಣ ಹೊರತು ಪಡಿಸಿ ಎಲ್ಲರೂ ರಾತ್ರಿ 11.30ರತನಕ ಮದ್ಯ ಸೇವನೆ ಮಾಡಿದ್ದಾರೆ. ಅಂದು ಮನೆಗೆ ಬರುತ್ತಿದ್ದ ಗೀತಾವಿಷ್ಣು ಕಾರು ಅನ್ನು ಅಪಘಾತ ಮಾಡಿದ್ದ. ನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ ಮಾರುತಿ ಓಮ್ನಿಗೆ ಢಿಕ್ಕಿ ಹೊಡೆದು ಪಾದಚಾರಿ ರಸ್ತೆಯಲ್ಲಿದ್ದ ನಾಮಫಲಕಕ್ಕೆ ಕಾರ್ ಗುದ್ದಿತ್ತು ಎನ್ನಲಾಗಿದೆ. ಈ ವೇಳೆ ಸುಮಾರು 20 ಜನರ ಗುಂಪು ಗೀತಾವಿಷ್ಣುವಿನ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ.
ಗಾಯಗೊಂಡಿದ್ದ ಗೀತಾವಿಷ್ಣು ಅನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾತ್ರೆ ನೀಡಿ ವಿಷ್ಣುಗೆ ನಿದ್ರೆ ಬರುವಂತೆ ಮಾಡಿದ್ದರು. ಬಳಿಕ ಪೊಲೀಸರಿಗೆ ವಿಷ್ಣುವಿನ ಸ್ಥಿತಿ ಸುಧಾರಿಸಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದು, ಇದರಲ್ಲಿ ಸಂಬಂಧಿಕರ ಪಾತ್ರ ಇದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿರುವುದಾಗಿ ತಿಳಿದುಬಂದಿದೆ.