×
Ad

ಜ.27ರಿಂದ ರಾಷ್ಟ್ರೀಯ ಕ್ರೀಡಾರೋಹಣ: ಸಚಿವ ರಹೀಂ ಖಾನ್

Update: 2019-01-25 23:29 IST

ಬೆಂಗಳೂರು, ಜ. 25: ಪ್ರಸ್ತುತ ಸಾಲಿನ 24ನೇ ರಾಷ್ಟ್ರೀಯ ಕ್ರೀಡಾರೋಹಣ ಅಂಗವಾಗಿ ‘ಸಾಹಸಿ ಚಾಂಪಿಯನ್ ಶಿಪ್ ಸ್ಪರ್ಧೆ’ ಸತತ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್ ತಿಳಿಸಿದರು.

ಶುಕ್ರವಾರ ನಗರದ ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.27ರಿಂದ ನಾಲ್ಕು ದಿನಗಳ ನಗರದ ವೈಎಂಸಿಎ ಮೈದಾನದಲ್ಲಿ ಇಲಾಖೆಯಿಂದ ನಿರ್ಮಿಸಿರುವ ನೂತನ ಕ್ಲೈಂಬಿಂಗ್ ವಾಲ್‌ನಲ್ಲಿ ಈ ಕ್ರೀಡಾಕೂಟ ಜರುಗಲಿದೆ ಎಂದರು.

ನಾಳೆ ರಾತ್ರಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಪ್ರಮುಖ ಗಣ್ಯರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ರಾಜ್ಯದಿಂದ 40ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶದ ದಕ್ಷಿಣ, ಉತ್ತರ, ಪೂರ್ವ ಸೇರಿದಂತೆ ಏಳು ವಲಯಗಳಿಂದ ಸ್ಪರ್ಧಿಸಿ, ಅರ್ಹತೆಯನ್ನು ಗಳಿಸಿದ ನೂರಾರು ಕ್ರೀಡಾಪಟುಗಳು ಈ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ. 10 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಸೇರಿದಂತೆ ಕ್ರೀಡೆಯ ಮೂರು ವಿಭಾಗಗಳಾದ ಲೀಡ್, ಸ್ಪೀಡ್ ಹಾಗೂ ಬೌಲ್ಡರಿಂಗ್ ವಿಭಾಗಗಳಲ್ಲಿ ಪ್ರತಿನಿಧಿಸುತ್ತಾರೆ ಎಂದು ಹೇಳಿದರು. ಈಗಾಗಲೇ ಅಕಾಡೆಮಿಯಿಂದ ಅನೇಕ ಕ್ರೀಡಾ ಸ್ಪರ್ಧೆಗಳನ್ನು ನಡೆಸಿದ್ದು, ಅವುಗಳಲ್ಲಿ ಮುಖ್ಯವಾಗಿ 2016ರಲ್ಲಿ 22ನೆ ರಾಷ್ಟ್ರೀಯ ಕ್ರೀಡಾರೋಹಣ ಸ್ಪರ್ಧೆ ಹಾಗೂ ಉಡುಪಿ ಉತ್ಸವ, ಚಿಕ್ಕಬಳ್ಳಾಪುರ ದಶಮಾನೋತ್ಸವ ಹಾಗೂ ಬೆಂಗಳೂರು ಬೌಲ್ಡರಿಂಗ್ ಚಾಂಪಿಯನ್ ಶಿಪ್ ಮುಖ್ಯವಾದದ್ದು ಎಂದರು.

ಈ ಬಾರಿ ಮಕ್ಕಳಿಗಾಗಿ ವಿಶೇಷ ಬೇಸಿಗೆ ತರಬೇತಿ ಶಿಬಿರ, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ವೈಟ್ ವಾಟರ್ ಕಯಾಕಿಂಗ್ ಲೆವೆಲ್ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಕೆ.ಶ್ರೀನಿವಾಸ್ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು.

ನಗದು ಬಹುಮಾನ

ರಾಷ್ಟ್ರೀಯ ಕ್ರೀಡಾರೋಹಣ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ 3 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಕರ್ನಾಟಕದಿಂದ 40ಕ್ಕೂ ಅಧಿಕ ಮಂದಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

-ರಹೀಂ ಖಾನ್, ಕ್ರೀಡಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News