ಅಂಬೇಡ್ಕರ್ ಮಾತುಗಳಲ್ಲಿ...

Update: 2019-01-26 05:26 GMT

‘‘ಪ್ರಜಾಪ್ರಭುತ್ವವೆನ್ನುವುದು ನಿಜಕ್ಕೂ ಬರಿಯ ಶಾಸನದ ವ್ಯವಸ್ಥೆಯಲ್ಲ. ಬದಲಾಗಿ ಅದೊಂದು ಸಾಮಾಜಿಕ ವ್ಯವಸ್ಥೆ. ಪ್ರಜಾಪ್ರಭುತ್ವವಾದಿ ಐಕ್ಯ, ಉದ್ದೇಶಗಳಲ್ಲಿ ಸಮಾನತೆ, ಸಾರ್ವಜನಿಕ ಗುರಿಗಳಲ್ಲಿ ಪೂರ್ಣ ವಿಧೇಯತೆ ಅಥವಾ ಸಹಾನುಭೂತಿಯಲ್ಲಿ ಪಾರಸ್ಪರಿಕತೆ ಇತ್ಯಾದಿಗಳು ಇದ್ದೇ ಇರುತ್ತದೆ ಎಂದೇನೂ ಅಲ್ಲ. ಆದರೆ ಇನ್ನೆರಡು ಸಂಗತಿಗಳು ಮಾತ್ರ ಬೇಕೇಬೇಕು.ಮೊದಲನೆಯದು ತಮ್ಮ ಸಮಾಜ ಬಾಂಧವರೆಲ್ಲರ ಬಗ್ಗೆ ಸಮಾನತೆ ಹಾಗೂ ಗೌರವದ ಮನೋಭೂಮಿಕೆ, ಇನ್ನೊಂದು ಕಟ್ಟುನಿಟ್ಟಾದ ಸಾಮಾಜಿಕ ಅಡ್ಡ ಗೋಡೆಗಳಿಲ್ಲದ ಸಂಘಟಿತ ಸಾಮಾಜಿಕ ವ್ಯವಸ್ಥೆ.ಕೆಲವು ಭಾಗ್ಯಶಾಲಿಗಳು ಹಾಗೂ ಇನ್ನುಳಿದಿರುವ ಹತಭಾಗ್ಯರ ನಡುವೆ ಪ್ರತ್ಯೇಕತೆ ಎದ್ದುಕಾಣುವಂತಹ ರೀತಿ, ಪರಸ್ಪರ ಸಮರಸತೆ ಇಲ್ಲದ ಕಾರಣ ತಾರತಮ್ಯ ವನ್ನುಂಟು ಮಾಡುವಂತಹ ಕಡೆ ಪ್ರಜಾಪ್ರಭುತ್ವವು ಅಸಾಧ್ಯ ಮಾತ್ರವಲ್ಲ ಅರ್ಥಹೀನ ಆಗುತ್ತದೆ.’’

***

‘‘ಧರ್ಮವು ನೈತಿಕತೆಯ ಮೇಲೆ ನಿಂತಿರಬೇಕು ಹೊರತು ಶಾಸ್ತ್ರ ಸಂಪ್ರದಾಯಗಳ ಮೇಲಲ್ಲ.’’

***

‘‘ಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾದರೆ ಅದು ಮಿತವಾದದ್ದು, ಭದ್ರವೂ ಆಗಿರಬೇಕು. ಅದು ಮಿತವ್ಯಯವಾಗಿರದಿದ್ದರೆ ಬಹುಶಃ ನಡೆದೀತು, ಆದರೆ ಸುಭದ್ರವಾಗಿಲ್ಲದಿದ್ದರೆ ಖಂಡಿತ ಸಾಧ್ಯವಿಲ್ಲ.’’

***

‘‘ಮನುಷ್ಯರು ಮರ್ತ್ಯರು. (ಸಾಯುವವರು) ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಆತ್ಮಗೌರವ ದಂಥ ಉದಾತ್ತ ಆದರ್ಶಗಳಿಂದ ವ್ಯಕ್ತಿ ತನ್ನ ಜೀವನವನ್ನು ಮತ್ತು ಲೋಕ ಜೀವನವನ್ನು ಶ್ರೀಮಂತಗೊಳಿಸಲು ಜೀವನವನ್ನು ಅರ್ಪಿಸಬೇಕು.’’

***

‘‘ಮೂಲಭೂತ ಅಥವಾ ಮೂಲಭೂತವಲ್ಲದ ಎಲ್ಲಾ ಹಕ್ಕುಗಳನ್ನು ಸಾಮಾಜಿಕ ಅಂತಃಸಾಕ್ಷಿಯಿಂದ ಮಾತ್ರ ಸಂರಕ್ಷಿಸಬಹುದು.’’

***

‘‘ಸರಕಾರವನ್ನು ವಿರೋಧಿಸಿ ನಿಲ್ಲುವ ರಾಜಕಾರಣಿಗಿಂತ ಸಮಾಜವನ್ನು ವಿರೋಧಿಸಿ ನಿಲ್ಲುವ ಸುಧಾರಕ ಹೆಚ್ಚು ಧೈರ್ಯಶಾಲಿಯಾಗಿರುತ್ತಾರೆ.’’

***

‘‘ಕಾನೂನೆಂಬುದು ಯಾವುದೋ ಒಬ್ಬ ವ್ಯಕ್ತಿಯ ಅಥವಾ ಕೆಲವು ಜನರ ಆದೇಶವಲ್ಲ. ಕಾನೂನೆಂಬುದು ಪರಿವರ್ತನೆಯನ್ನು ನಿಯಂತ್ರಿಸುವ ಒಂದು ವಿಧಿ. ಹೀಗಿರುವಾಗ ಸರ್ವಮಾನ್ಯವಾದ ಕಾನೂನು ಯಾವ ಭೇದವೂ ಇಲ್ಲದೆ ಎಲ್ಲರಿಗೂ ಅನ್ವಯವಾಗುವಂತಿದ್ದು ಎಲ್ಲರ ಒಪ್ಪಿಗೆಗೂ ಅರ್ಹವಾಗಿರಬೇಕು. ಕಾನೂನು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು.’’

***

‘‘ಭಾರತದ ಜಾತಿ ಪದ್ಧತಿಯೇ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಅದು ನಿವಾರಣೆಯಾಗದೆ ಭಾರತದ ಪ್ರಗತಿ ಅಸಾಧ್ಯ.’’

***

‘‘ವಾಸ್ತವವಾಗಿ ಬ್ರಾಹ್ಮಣತ್ವ ಎನ್ನುವುದು ಧರ್ಮವನ್ನು ಒಂದು ರೀತಿಯ ಕಸುಬು ಮತ್ತು ವ್ಯಾಪಾರವನ್ನಾಗಿ ಮಾಡಿಕೊಳ್ಳಲಾಗಿದೆ. ಇಂತಹ ಬ್ರಾಹ್ಮಣತ್ವ ಎಲ್ಲ ಜನ ವರ್ಗದಲ್ಲೂ ಇರಬಹುದು. ಅದು ಸಮಾಜದಲ್ಲಿ ಅವನತಿಯನ್ನು ಉಂಟು ಮಾಡುವುದೇ ಹೊರತು ಪ್ರಗತಿಯನ್ನು ಎಂದಿಗೂ ಮಾಡದು.’’

***

‘‘ಪ್ರಜಾಪ್ರಭುತ್ವವೆಂದರೆ ಕೇವಲ ಒಂದು ಸರಕಾರವಲ್ಲ. ಆದರ್ಶ ಸಮಾಜದ ಕನಸನ್ನು ನನಸಾಗಿಸಬಲ್ಲ ಸುಲಭ ಮಾರ್ಗದ ಇನ್ನೊಂದು ಹೆಸರೇ ಪ್ರಜಾಪ್ರಭುತ್ವ’’

***

‘‘ಸಂಪತ್ತು ಮತ್ತು ಕೀರ್ತಿಯನ್ನು ಗಳಿಸಲು ಧರ್ಮ ಸಾಧನವಲ್ಲ. ಅದು ವ್ಯಕ್ತಿಯ ಮನಸ್ಸಿನಲ್ಲಿರುವ ಒಂದು ಅತ್ಯಮೂಲ್ಯ ಆಸ್ತಿ. ಮಾನಸಿಕ ಶಾಂತಿಯನ್ನು ಸಾಧಿಸಲು ಮತ್ತು ಸಮಾಜದ ಸಂಕಷ್ಟಗಳನ್ನು ಪರಿಹರಿಸಲು ಮಾತ್ರ ಧರ್ಮವನ್ನು ಬಳಸಿಕೊಳ್ಳಬೇಕು.’’

***

‘‘ಯಾವುದೇ ಒಂದು ಜನಾಂಗದ ಜೀವನದಲ್ಲಿ ರಾಜಕೀಯ ಅಧಿಕಾರ ಎನ್ನುವುದು ಬಹಳ ಅಮೂಲ್ಯ ವಾದುದು. ಅದರಲ್ಲೂ ವಿಶೇಷವಾಗಿ ಆ ಜನಾಂಗದ ಸ್ಥಾನಮಾನಗಳು ಸವಾಲಿಗೆ ಒಳಪಟ್ಟಾಗ ಹಾಗೂ ಸವಾಲನ್ನು ಎದುರಿಸಿ ಅದು ತನ್ನ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಆ ಜನಾಂಗಕ್ಕೆ ಬೇಕಾದ ಸಾಧನವೆಂದರೆ ರಾಜಕೀಯ ಅಧಿಕಾರ ಮಾತ್ರ’’

***

‘‘ಹಕ್ಕುಗಳನ್ನು ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯಿಂದ ರಕ್ಷಿಸಬೇಕು; ಕಾನೂನಿನಿಂದಲ್ಲ. ಕಾನೂನಿನ ಮೂಲಕ ಜಾರಿಗೆ ಬರುವ ಹಕ್ಕುಗಳನ್ನು ಸಮಾಜ ಮನ್ನಿಸಿದರೆ ಹಕ್ಕುಗಳು ಉಳಿಯುತ್ತವೆ. ಮೂಲಭೂತ ಹಕ್ಕುಗಳನ್ನು ಸಮಾಜ ವಿರೋಧಿಸಿದರೆ ಯಾವುದೇ ಪಾರ್ಲಿಮೆಂಟ್, ಯಾವುದೇ ನ್ಯಾಯಾಲಯವೂ ಹಕ್ಕುಗಳನ್ನು ನಿಜವಾದ ಅರ್ಥದಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ.’’

***

‘‘ತಮ್ಮ ಕೀಳರಿಮೆಯ ಮತ್ತು ಅಧಿಕಾರದ ಬಲದ ಬಗ್ಗೆ ಜಾಗೃತಿ ಇಲ್ಲದ ಕಾರಣದಿಂದ ದಾಸ್ಯ ವರ್ಗಗಳ ಜನರು ಆಳುವ ವರ್ಗದ ಜನರನ್ನು ಸಹಜ ನಾಯಕರೆಂದು ಒಪ್ಪಿಕೊಂಡು ತಾವಾಗಿಯೇ ಆಳುವ ವರ್ಗದ ಜನರನ್ನು ತಮ್ಮ ಪ್ರಭುಗಳು ಎಂದು ಆರಿಸಿ ಬಿಡುತ್ತಾರೆ. ನೈಜ ಪ್ರಜಾಪ್ರಭುತ್ವ ಮತ್ತು ಸ್ವರಾಜ್ಯಗಳಿದ್ದಲ್ಲಿ ಆಳುವ ವರ್ಗ ಇರುವುದು ಸಾಧ್ಯವೇ ಇಲ್ಲ ಹಾಗೂ ಎಲ್ಲಿ ಆಳುವ ವರ್ಗ ಅಧಿಕಾರಕ್ಕಾಗಿ ತನ್ನ ಪ್ರಭಾವವನ್ನು ಕಾಯ್ದುಕೊಂಡಿದೆಯೋ ಅಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವರಾಜ್ಯ ಬರೀ ಸುಳ್ಳು, ಬೂಟಾಟಿಕೆ.’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News