ಮೋದಿಯ ಅಸಮರ್ಥ ಆಡಳಿತದ ಕುರಿತು ಜಾಗೃತಿ ಅಗತ್ಯ: ದಿನೇಶ್ ಅಮೀನ್ ಮಟ್ಟು

Update: 2019-01-26 13:35 GMT

ಬೆಂಗಳೂರು, ಜ.26: ಬಿಜೆಪಿಯ ಕೋಮುವಾದಿ ಸಿದ್ಧಾಂತಗಳನ್ನು ಟೀಕಿಸುವುದರ ಬದಲಾಗಿ, ಪ್ರಧಾನಿ ನರೇಂದ್ರ ಮೋದಿ ಒಳಗೊಂಡಂತೆ ಕೇಂದ್ರ ಸರಕಾರದ ಅಸಮರ್ಥ ಆಡಳಿತ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಭಾರತದ ಒಕ್ಕೂಟ ಮತ್ತು ಸಂವಿಧಾನವನ್ನು ಬಲಗೊಳಿಸೋಣ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಕೋಮುವಾದಿ ವಿಷಯಗಳನ್ನು ಪ್ರಸ್ತಾಪಿಸಿದರೆ, ಪುನಃ ಅವರಿಗೆ ಬಿಟ್ಟಿ ಪ್ರಚಾರ ಸಿಕ್ಕಿದಂತಾಗುತ್ತದೆ. ಇದರಿಂದ ಜನತೆಗೆ ಬಿಜೆಪಿಯ ಜನವಿರೋಧಿ ನಿಲುವನ್ನು ಸಮರ್ಥವಾಗಿ ತಲುಪಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು.

2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೀಡಿದ್ದ ಒಂದೇ ಒಂದು ಆಶ್ವಾಸನೆಯನ್ನು ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಇರುವ ಉದ್ಯೋಗವನ್ನೆ ನಾಶ ಮಾಡಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರುವುದಾಗಿ ಹೇಳಿ, ನುಣುಚಿಕೊಂಡಿದ್ದಾರೆ. ಹೀಗೆ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ಈ ವಿಷಯಗಳನ್ನೆಲ್ಲ ಜನರಿಗೆ ಪರಿಣಾಮಕಾರಿಯಾಗಿ ತಿಳಿಸುವಂತಹ ಕೆಲಸವಾಗಬೇಕಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರುತ್ತಿದ್ದಂತೆ ಜನವಿರೋಧಿ ನೀತಿಗಳನ್ನು ಅನುಸರಿಸಿದರು ಎಂಬುದನ್ನು ತಿಳಿಸಬೇಕಿದೆ. ನೋಟು ನಿಷೇಧದಿಂದ ಜನಸಾಮಾನ್ಯರಿಗೆ ಆಗಿರುವ ಅನ್ಯಾಯದ ಜೊತೆಗೆ ಇದರಿಂದ ದೇಶದ ಮೇಲಾದ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು.

ಈಡೇರದ ಅಂಬೇಡ್ಕರ್ ಆಶಯ

ಡಾ.ಬಿ.ಆರ್.ಅಂಬೇಡ್ಕರ್ ಆಶಿಸಿದ್ದ ಸಂವಿಧಾನದ ಪ್ರಕಾರ ಕೃಷಿ, ವಿಮಾ ಕ್ಷೇತ್ರ ಸಂಪೂರ್ಣವಾಗಿ ರಾಷ್ಟ್ರೀಕರಣವಾಗಬೇಕು. ಖಾಸಗಿ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಬಯಸಿದ್ದರು. ಇದು ನಿಜಕ್ಕೂ ಜಾರಿಯಾಗಿದ್ದರೆ, ಭಾರತದ ಜನತೆ ನೆಮ್ಮದಿಯ ಜೀವನ ನಡೆಸಬಹುದಾಗಿತ್ತು.

- ದಿನೇಶ್ ಅಮೀನ್, ಮಟ್ಟು ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News