ಮೇಲ್ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ಸಂವಿಧಾನಕ್ಕೆ ಮಾಡಿದ ಅಪಚಾರ: ಪ್ರೊ.ರವಿವರ್ಮ ಕುಮಾರ್

Update: 2019-01-26 13:50 GMT

ಬೆಂಗಳೂರು, ಜ.26: ಕೇಂದ್ರ ಸರಕಾರ ಸಂವಿಧಾನ ತಿದ್ದುಪಡಿ ಮಾಡಿ ಮೇಲ್ಜಾತಿ ಸಮುದಾಯಕ್ಕೆ ಶೇ.10ರಷ್ಟು ಮೀಸಲಾತಿ ಒದಗಿಸಿರುವುದು ಭಾರತದ ಸಂವಿಧಾನಕ್ಕೆ ಮಾಡಿರುವ ಅಪಚಾರವೆಂದು ಸಂವಿಧಾನ ತಜ್ಞ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಿಸಿದರು.

ಶನಿವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಭಾರತದ ಒಕ್ಕೂಟ ಮತ್ತು ಸಂವಿಧಾನವನ್ನು ಬಲಗೊಳಿಸೋಣ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಮೀಸಲಾತಿಯ ಆಶಯವನ್ನೆ ಬುಡಮೇಲು ಮಾಡಲು ಹೊರಟಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾವಿರಾರು ವರ್ಷಗಳಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಸಲುವಾಗಿಯಷ್ಟೆ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿಯ ಪರಿಕಲ್ಪನೆಯನ್ನು ಜಾರಿಗೆ ತಂದರು. ಮೇಲ್ಜಾತಿಯ ಬಡವರ ಅಭಿವೃದ್ಧಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಕ್ತ ಅವಕಾಶವಿದೆ. ಆದಾಗ್ಯು, ಕೇಂದ್ರ ಸರಕಾರ ಮೀಸಲಾತಿಯ ನಿಜವಾದ ಆಶಯಕ್ಕೆ ಧಕ್ಕೆ ತಂದು, ಅದರಲ್ಲಿಯೂ ತಾರತಮ್ಯ ಮಾಡುವ ದುರುದ್ದೇಶದಿಂದ ಮೇಲ್ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು.

 ಶೇ.18ರಷ್ಟು ಜನಸಂಖ್ಯೆಯಿರುವ ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.15ರಷ್ಟು ಮೀಸಲಾತಿ, ಶೇ.8ರಷ್ಟಿರುವ ಪರಿಶಿಷ್ಟ ಪಂಗಡಕ್ಕೆ ಶೇ.3ರಷ್ಟು ಮೀಸಲಾತಿ, ಶೇ.13ರಷ್ಟಿರುವ ಮುಸ್ಲಿಮ್ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ, ಶೇ.13ರಷ್ಟಿರುವ ಒಕ್ಕಲಿಗರಿಗೆ ಶೇ.4ರಷ್ಟು ಮೀಸಲಾತಿ ಇದೆ. ಆದರೆ, ಶೇ.4ರಷ್ಟಿರುವ ಬ್ರಾಹ್ಮಣರಿಗೆ ಮಾತ್ರ ಶೇ.10ರಷ್ಟು ಮೀಸಲಾತಿ ಒದಗಿಸಿರುವುದು ಸಾಮಾಜಿಕ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾದ ಮೇಲೆ ಪ್ರಾದೇಶಿಕ ಭಾಷೆ, ಸಂಸ್ಕೃತಿಗಳ ಮೇಲೆ ಹಿಂದಿ ಭಾಷೆಯನ್ನು ಹೇರಿಕೆ ಮಾಡಲಾಗುತ್ತಿದೆ. ರಾಜ್ಯದ ಬ್ಯಾಂಕ್‌ಗಳಲ್ಲಿ ಉತ್ತರ ಭಾರತದ ಉದ್ಯೋಗಿಗಳನ್ನೆ ಭರ್ತಿ ಮಾಡಲಾಗುತ್ತಿದೆ. ಆ ಮೂಲಕ ಹಿಂದಿ ಭಾಷೆ ಕಲಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖವಾಣಿಯಾಗಿರುವ ಸಂಘಪರಿವಾರವೆ ಅಧಿಕಾರಕ್ಕೆ ಬಂದರೆ, ಈ ದೇಶದ ಬಹುತ್ವ, ಸೌಹಾರ್ದತೆಗಳು ಸರ್ವನಾಶವಾಗಲಿವೆ. ಹೀಗಾಗಿ ಪ್ರಜಾಪ್ರಭುತ್ವದ ಆಶಯವುಳ್ಳವರು ಕೋಮುವಾದಿ ಶಕ್ತಿಗಳ ಷಡ್ಯಂತ್ರಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಹಿರಿಯ ವಿಚಾರವಾದಿ ಜಿ.ಕೆ.ಗೋವಿಂದರಾವ್ ಮಾತನಾಡಿ, ದೇಶದಲ್ಲಿ ಸಂಘಟಿತ ಧಾರ್ಮಿಕತೆ, ಮಾಧ್ಯಮಗಳ ಸುಳ್ಳು ಪ್ರಚಾರ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಅನೈತಿಕತೆಗಳು ರಾಜ್ಯದ ಜನತೆಯನ್ನು ತಪ್ಪು ಹಾದಿಗೆ ನೂಕುತ್ತಿವೆ. ಹಾಗೂ ಇವುಗಳ ಬಗ್ಗೆ ಸದಾ ಎಚ್ಚರವಿದ್ದು, ವೈಚಾರಿಕತೆಯನ್ನು ರೂಢಿಸಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ನಾಯಕ ಕಡಿದಾಳು ಶಾಮಣ್ಣ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅಬ್ದುಲ್ ಮಝೀದ್ ಶೋಯಬ್, ಲಕ್ಷ್ಮಿನಾರಾಯಣ ನಾಗವಾರ ಮತ್ತಿತರರಿದ್ದರು.

ಬಿಜೆಪಿ ನಾಯಕರ ಮೇಲೆ ಏಕೆ ಐಟಿ ದಾಳಿ ಇಲ್ಲ?

ನಮ್ಮ ಕಾರ್ಯಾಂಗ, ನ್ಯಾಯಾಂಗ ಸಂವಿಧಾನದ ಶಿಶುಗಳಾಗಿವೆ. ಕೇಂದ್ರ ಸರಕಾರ ಈ ಶಿಶುಗಳ ಮೂಲಕ ಸಂವಿಧಾನದ ಮೂಲಆಶಯಗಳನ್ನು ನಾಶ ಮಾಡಲು ಹೊರಟಿದೆ. ಸಿಬಿಐ, ಐಟಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು, ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ಮಾಡಿಸಲಾಗುತ್ತದೆ. ಆದರೆ, ಆಪರೇಷನ್ ಕಮಲಕ್ಕೆ ಮುಂದಾಗಿರುವ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಮನೆಗಳ ಮೇಲೆ ಯಾಕೆ ದಾಳಿಗಳು ನಡೆಸುತ್ತಿಲ್ಲ.

ಪ್ರೊ.ರವಿವರ್ಮ ಕುಮಾರ್, ಸಂವಿಧಾನ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News