ಫೈರೋಝ್ ಸಾವು ಪ್ರಕರಣ: ಸಿಒಡಿ ತನಿಖೆಗೆ ಎಸ್ ಡಿಪಿಐ ಆಗ್ರಹ

Update: 2019-01-26 14:37 GMT

ಬೆಂಗಳೂರು, ಜ.26: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಅನುಮಾನಾಸ್ಪದವಾಗಿ ಸಾವಿನಪ್ಪಿದ್ದಾನೆ ಎನ್ನಲಾದ ಫೈರೋಝ್ ಪ್ರಕರಣ ಸಂಬಂಧ ಸಿಒಡಿ ತನಿಖೆ ನಡೆಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಶನಿವಾರ ನಗರದ ಟ್ಯಾನರಿ ರಸ್ತೆಯ ಅಂಬೇಡ್ಕರ್ ಪ್ರತಿಮೆ ಎದುರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಬೆಂಗಳೂರು ಘಟಕ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪೋಷಕರು, ಫೈರೋಝ್ ಅವರನ್ನು ಹತ್ಯೆ ಮಾಡಲಾಗಿದೆ. ಇದರಲ್ಲಿ ಜೈಲಿನಲ್ಲಿರುವ ಕೆಲ ಪೊಲೀಸರ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಬೆಂಗಳೂರು ಜಿಲ್ಲಾಧ್ಯಕ್ಷ ಮುಹಮ್ಮದ್ ಶರೀಫ್, 21 ವರ್ಷದ ಫೈರೋಝ್ ಹೊಟೇಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದು, ಮನೆಗೆ ಏಕೈಕ ಆಧಾರವಾಗಿದ್ದ. ಅವರ ವೇತನದಿಂದಲೇ ಮನೆಯ ಸದಸ್ಯರು ಜೀವನ ಸಾಗಿಸುತ್ತಿದ್ದರು ಎಂದರು.

10 ತಿಂಗಳ ಹಿಂದೆ, ರಾತ್ರಿ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಫೈರೋಝ್ ಅನ್ನು ತಡೆದ ಪೊಲೀಸರು, ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, ಹಣ ನೀಡಲು ನಿರಾಕರಿಸಿದ ಕಾರಣ, ಅವನ ಬೈಕ್‌ನಲ್ಲಿ ಗಾಂಜಾವನ್ನಿಟ್ಟು ಸುಳ್ಳು ಆರೋಪದಲ್ಲಿ ಜೈಲಿಗೆ ಕಳಿಸಿದ್ದರು ಎಂದು ಅವರು ಆರೋಪಿಸಿದರು.

ಬಳಿಕ ಜೈಲಿನ್ಲಲಿ ಪೊಲೀಸರು ಅವನ ಮೇಲೆ ಉದ್ದೇಶ ಪೂರ್ವಕವಾಗಿ ಗಂಭೀರ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪೋಷಕರಿಗೆ ಫೈರೋಝ್ ಹೇಳಿಕೊಂಡು ಕಣ್ಣೀರು ಹಾಕಿದ್ದ. ಕಳೆದ ವಾರ ಆತ ದಿಢೀರ್ ಮೃತಪಟ್ಟಿದ್ದು, ಆತನ ಮೈ ಮೇಲೆ ಹಲವು ಗಾಯಗಳ ಗುರುತು ಇತ್ತು ಎಂದು ತಿಳಿಸಿದರು.

ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಈ ರೀತಿ ಕೃತ್ಯವನ್ನು ಪೊಲೀಸರೆ ಮಾಡಿದ್ದಾರೆ. ಹೀಗಾಗಿ, ಮಾನವ ಹಕ್ಕುಗಳ ಆಯೋಗ ಈ ಸಂಬಂಧ ಪ್ರಕರಣ ದಾಖಲಿಸಕೊಳ್ಳಬೇಕು. ಜೊತೆಗೆ, ಗೃಹ ಸಚಿವರು ಉನ್ನತ ಮಟ್ಟದ ತನಿಖೆ ನಡೆಸಬೇಕು. ಇಲ್ಲದಿದ್ದಲ್ಲಿ, ಬೃಹತ್ ಹೋರಾಟವನ್ನು ರಾಜ್ಯದೆಲ್ಲೆಡೆ ನಡೆಸಲಾಗುವುದು ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ವಾಜೀದ್, ಎಸ್‌ಡಿಪಿಐ ಮುಖಂಡರಾದ ಹಝ್ರತ್ ಸಮೀರ್, ಫೈರೋಝ್ ಪೋಷಕರು ಉಪಸ್ಥಿತರಿದ್ದರು.

‘ತನಿಖೆ ಬೇಕು’

21 ವರ್ಷದ ಯುವಕ ಫೈರೋಝ್ ಅನ್ನು ಉದ್ದೇಶಪೂರ್ವಕವಾಗಿಯೇ ಪೊಲೀಸರು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಗೃಹ ಸಚಿವರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಜೊತೆಗೆ, ಪರಿಹಾರ ಒದಗಿಸಬೇಕು.

- ಯಾಸ್ಮೀನ್, ಫೈರೋಝ್ ಸಂಬಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News