ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಪ್ರಕಾಶ್ ರೈ

Update: 2019-01-26 15:38 GMT

ಬೆಂಗಳೂರು, ಜ.26: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಕಳೆದ ಒಂದು ವಾರದಿಂದ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ.

ಶನಿವಾರ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಾದ್ಯಂತ ಸುತ್ತಾಡಿದ ಪ್ರಕಾಶ್ ರೈ, ಕ್ಷೇತ್ರದಲ್ಲಿ ಕಂಡುಬರುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಸ್ಥಳೀಯ ಜನರೊಂದಿಗೆ ಚರ್ಚಿಸಿದರು. ಪ್ರಕಾಶ್ ರೈವರ ಜನರೊಂದಿಗೆ ಆತ್ಮೀಯವಾಗಿ ನಡೆದುಕೊಂಡ ರೀತಿಯ ಕುರಿತು ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.

ಸಮಸ್ಯೆಗಳ ಮಹಾಪೂರ: ಪ್ರತಿ ಕ್ಷೇತ್ರದಲ್ಲೂ ಸಾಮಾನ್ಯ ಜನತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಕೇವಲ ವೃದ್ಧಾಪ್ಯ ವೇತನ ಪಡೆಯುವುದಕ್ಕಾಗಿ ವರ್ಷಾನುಗಟ್ಟಲೆ ತಿರುಗಾಟ ನಡೆಸಿರುವುದು ಸಾಮಾನ್ಯವಾಗಿದೆ. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ, ರಸ್ತೆ ದುರಸ್ಥಿ, ನ್ಯಾಯಬೆಲೆ ಅಂಗಡಿಯಲ್ಲಿ ವಂಚನೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸ್ಥಳೀಯರು ನನ್ನೊಂದಿಗೆ ಹಂಚಿಕೊಂಡಿದ್ದಾರೆಂದು ಪ್ರಕಾಶ್ ರೈ ತಿಳಿಸಿದರು.

 ಕ್ಷೇತ್ರದ ಮೂಲಭೂತ ಸಮಸ್ಯೆಗಳ ಪರಿಹಾರ, ಯುವಜನತೆಗೆ ಉತ್ತಮ ಉದ್ಯೋಗ ಸೇರಿದಂತೆ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಕೈಗೊಳ್ಳಬೇಕಾದ ಯೋಜನೆಗಳನ್ನು ನನ್ನ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಪ್ರಣಾಳಿಕೆಯನ್ನು ಸಿದ್ಧಗೊಳಿಸಿ, ಅವರ ಮುಂದಿಡಲಿದ್ದೇನೆ. ನಂತರ ಅವರೊಂದಿಗೆ ಸೇರಿ ಚುನಾವಣಾ ಪ್ರಚಾರ ನಡೆಸಲಿದ್ದೇನೆಂದು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ನಂತರ ಪ್ರಕಾಶ್ ರೈ ಕನ್ನಡದ ಧೀಮಂತ ಪತ್ರಕರ್ತ ಪಿ.ಲಂಕೇಶ್ ಅವರ ಹತ್ತೊಂಬತ್ತನೆ ಪುಣ್ಯತಿಥಿಯ ನಿಮಿತ್ತ ಅವರ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News