ದೇಶದ ಗಮನ ಸೆಳೆದ ಕೊಪ್ಪಳದ ರಾಷ್ಟ್ರೀಯ ಮತದಾರರ ದಿನಾಚರಣೆ

Update: 2019-01-26 16:53 GMT

ಬೆಂಗಳೂರು, ಜ. 26: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಕೊಪ್ಪಳದ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 6 ಸಾವಿರ ಜನರಿಂದ ಮತದಾನದ ಜಾಗೃತಿಯ ಮಾನವ ಸರಪಳಿ ನಿರ್ಮಾಣ ಮಾಡಿದ್ದು, ದೇಶದ ಗಮನ ಸೆಳೆದಿದೆ.

ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ 2018ರ ವಿಧಾನಸಭೆ ಚುನಾವಣಾ ಪ್ರಕ್ರಿಯೆಗಳಲ್ಲಿ ಅತ್ಯುತ್ತಮ ರಾಜ್ಯವೆಂದು ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾದ ಕರ್ನಾಟಕ ರಾಜ್ಯದಲ್ಲಿ ಇಂತಹ ವಿನೂತನ ಜಾಗೃತಿ ಕಾರ್ಯಕ್ರಮಗಳು ಮತ್ತು ಚುನಾವಣಾ ಕಾರ್ಯಗಳ ಉತ್ತಮ ನಿರ್ವಹಣೆ ಪ್ರಶಸ್ತಿಗೆ ಸಂದ ಗೌರವವಾಗಿದೆ. ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 5 ಸಾವಿರ ವಿದ್ಯಾರ್ಥಿಗಳು ಮತ್ತು 1ಸಾವಿರ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸುಮಾರು 6 ಸಾವಿರಕ್ಕೂ ಹೆಚ್ಚಿನ ಜನರು ಮತದಾನ ಮಾಡಿರುವ ಬೆರಳಿನ ಶಾಯಿ ಗುರುತು ಹೊಂದಿರುವ ಮಾನವ ಸರಪಳಿಯನ್ನು ನಿರ್ಮಿಸಿದ್ದರು.

ಶಾಯಿ ಗುರುತು ಭಾರತದ ನಕ್ಷೆಯ ಆಕಾರದಲ್ಲಿ ರಚಿಸಿದ್ದು ಅತೀ ವಿಶೇಷವಾಗಿತ್ತು. ಮಾನವ ಸರಪಳಿ ಮೂಲಕ ಬರೆಯಲಾಗಿದ್ದ ಇಂಗ್ಲೀಷ್ ಭಾಷೆಯಲ್ಲಿ (MY VOTE MY RIGHT) ಮತ್ತು ಕನ್ನಡದಲ್ಲಿ ‘ನಮ್ಮ ಮತ ನಮ್ಮ ಹಕ್ಕು’ ಜನರ ಕಣ್ಮನ ಸೆಳೆಯಿತು. ಜಿಲ್ಲಾಡಳಿತದ ಈ ವಿನೂತನ ಮತದಾರರ ಜಾಗೃತಿಯ ಮಾನವ ಸರಪಳಿ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News