×
Ad

ಬ್ಯಾಂಕ್ ನೌಕರರಿಗೆ 20 ವರ್ಷಗಳಿಂದ ಒಂದೇ ಪಿಂಚಣಿ: ಡಾ.ಎ.ಅನಂತಕೃಷ್ಣ ರಾವ್ ಆರೋಪ

Update: 2019-01-26 22:37 IST

ಬೆಂಗಳೂರು, ಜ.26: ವೇತನ ಆಯೋಗದಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ನಿವೃತ್ತ ನೌಕರರ ಪಿಂಚಣಿ ಹೆಚ್ಚಾಗಿದ್ದು, ಬ್ಯಾಂಕ್ ನೌಕರರಿಗೆ ಮಾತ್ರ 20 ವರ್ಷಗಳ ಹಿಂದೆ ನೀಡುತ್ತಿದ್ದ ಪಿಂಚಣಿಯನ್ನೇ, ಇಂದಿಗೂ ನೀಡುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಮಾಜಿ ನಿರ್ದೇಶಕ ಡಾ.ಎ.ಅನಂತಕೃಷ್ಣ ರಾವ್ ಆರೋಪ ಮಾಡಿದ್ದಾರೆ.

ಶನಿವಾರ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ಸ್‌ ಕಮ್ಯೂನ್ ಆಯೋಜಿಸಿದ್ದ, ‘ಬ್ಯಾಂಕ್ ನಿವೃತ್ತರ ಸಮಸ್ಯೆಗಳು ಹಾಗೂ ಪರಿಹಾರಗಳು’ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬ್ಯಾಂಕ್ ನೌಕರರಿಗೆ 1996ರಿಂದ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ, ಈವರೆಗೆ ಒಮ್ಮೆಯೂ ಪರಿಷ್ಕರಣೆಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ನಿವೃತ್ತ ನೌಕರರ ಮಾದರಿಯಲ್ಲಿಯೇ ಬ್ಯಾಂಕ್ ನಿವೃತ್ತ ನೌಕರರಿಗೂ ಪಿಂಚಣಿ ನೀಡಬೇಕು. ಅಲ್ಲದೆ, ನಿವೃತ್ತ ನೌಕರರು ತೊಂದರೆ ಅನುಭವಿಸುವಂತಹ ಪರಿಸ್ಥಿತಿಯಿದೆ. ಹೀಗಾಗಿ ಸರಕಾರ ಬ್ಯಾಂಕ್ ನೌಕರರಿಗೂ ಸಹ ವೇತನ ಆಯೋಗದ ವೇತನದಂತೆ ಪಿಂಚಣಿ ನೀಡಬೇಕು ಎಂದು ಒತ್ತಾಯ ಮಾಡಿದರು.

ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್‌ ಕಾನ್ಫೆಡರೇಷನ್‌ನ ಮಾಜಿ ಉಪಾಧ್ಯಕ್ಷ ಆರ್.ರಮೇಶ್ ಮಾತನಾಡಿ, ನಿವೃತ್ತ ನೌಕರರು ಮೃತಪಟ್ಟರೆ ಅವರ ಅವಲಂಬಿತರಿಗೆ ಪಿಂಚಣಿಯ ಶೇ.30ರಷ್ಟು ಪಿಂಚಣಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ನೀಡುತ್ತವೆ. ಆದರೆ, ಬ್ಯಾಂಕ್ ನೌಕರರ ಅವಲಂಬಿತರಿಗೆ ಶೇ.15ರಷ್ಟು ಪಿಂಚಣಿಯನ್ನು ಮಾತ್ರ ನೀಡಲಾಗುತ್ತಿದ್ದು, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಬ್ಯಾಂಕ್ ನೌಕರರಿಗೂ ಸರಕಾರಿ ನೌಕರರಿಗೆ ನೀಡುವಂತ ಸೌಲಭ್ಯಗಳನ್ನು ಒದಗಿಸಲು ಸರಕಾರ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾಜಿ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮಾ, ಲೆಕ್ಕ ಪರಿಶೋಧಕ ಮೋಹನ್ ಲಾವಿ, ಎಸ್‌ಬಿಎಂನ ಮಾಜಿ ನಿರ್ದೇಶಕ ಡಾ.ಕೆ.ಲಕ್ಷ್ಮೀಶ, ಕಮ್ಯೂನ್‌ನ ನಿರ್ದೇಶಕ ಕೆ.ಎನ್.ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ಬ್ಯಾಂಕ್ ನೌಕರರು ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಒತ್ತಡ ತಡೆಯಲಾರದೆ ನೂರಾರು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರೊಂದಿಗೆ ಹೆಚ್ಚಿನವರು ಹೃದಯಾಘಾತಕ್ಕೆ ಒಳಗಾಗಿರುವ ಅಂಕಿ-ಅಂಶಗಳಿವೆ. ಆದರೆ, ನೌಕರರಿಗೆ ದೊರೆಯುತ್ತಿರುವ ಸೌಲಭ್ಯಗಳು ಮಾತ್ರ ಅತ್ಯಂತ ಕಡಿಮೆ.

-ಆರ್.ರಮೇಶ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್‌ ಕಾನ್ಫೆಡರೇಷನ್‌ನ ಮಾಜಿ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News