ಬೆಂಗಳೂರಿನ ಬಡಾವಣೆಗೆ ಕೆ.ಎಸ್.ನರಸಿಂಹಸ್ವಾಮಿ ಹೆಸರಿಡಲು ನರಹಳ್ಳಿ ಬಾಲಸುಬ್ರಹ್ಮಣ್ಯ ಒತ್ತಾಯ
ಬೆಂಗಳೂರು, ಜ.26: ಬೆಂಗಳೂರಿನ ಯಾವುದಾದರೊಂದು ಬಡಾವಣೆಗೆ ಮೈಸೂರು ಮಲ್ಲಿಗೆ ಖ್ಯಾತಿಯ ಸಾಹಿತಿ ಕೆ.ಎಸ್.ನರಸಿಂಹಸ್ವಾಮಿಯವರ ಹೆಸರನ್ನಿಡಲು ಹಿರಿಯ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಒತ್ತಾಯಿಸಿದ್ದಾರೆ.
ಶನಿವಾರ ನಗರದ ಕೆ.ಎಸ್.ನರಸಿಂಹಸ್ವಾಮಿ ಉದ್ಯಾನವನದಲ್ಲಿ ಕೆಎಸ್‌ಎನ್ ಟ್ರಸ್ಟ್ ಆಯೋಜಿಸಿದ್ದ ಕೆ.ಎಸ್.ನರಸಿಂಹಸ್ವಾಮಿಯವರ 104ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ಇವತ್ತು ಸಮಾಜದಲ್ಲಿ ಅಸಹನೆ, ಅಶಾಂತಿ, ಅತೃಪ್ತಿ, ದ್ವೇಷ, ತಾಂಡವವಾಡುತ್ತಿದೆ. ಇದಕ್ಕೆಲ್ಲ ಪರಿಹಾರವಾಗಿ ನರಸಿಂಹಸ್ವಾಮಿ ಅವರು ತೋರಿದ ಪ್ರೀತಿಯ ಪರಿಕಲ್ಪನೆಯ ಮಾರ್ಗ ಬಹುದೊಡ್ಡದಾಗಿದೆ. ಕೆಎಸ್‌ಎನ್ ತಮ್ಮನ್ನು ‘ಜನಸಾಮಾನ್ಯರ ಕವಿ’ ಎಂದು ಕರೆದುಕೊಂಡಿದ್ದಾರೆ ಎಂದು ತಿಳಿಸಿದರು.
ಹೀಗಾಗಿ, ಟ್ರಸ್ಟ್ ಈ ಬಾರಿ ಯಾವುದೇ ಸಭಾಂಗಣದಲ್ಲಿ ಜನರ ಸಮ್ಮುಖದಲ್ಲಿ, ದೊಡ್ಡ ವೇದಿಕೆಯಲ್ಲಿ ಕಾರ್ಯಕ್ರಮ ಮಾಡದೆ ಅವರ ಹೆಸರಿನ ಉದ್ಯಾನವನದಲ್ಲಿ ಅವರ ಜೀವನದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಹಾಡುಗಳನ್ನು ಹಾಡುತ್ತಾ ಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ, ಅಧ್ಯಕ್ಷರು ಸೂಚಿಸಿದಂತೆ ಬೆಂಗಳೂರಿನ ಯಾವುದಾದರೂ ಒಂದು ಬಡಾವಣೆಗೆ ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರನ್ನು ಖಂಡಿತಾ ಇಟ್ಟು ಆ ಮೂಲಕ ಅಂಥ ಮಹನೀಯರ ಹೆಸರನ್ನು ಚಿರಸ್ಥಾಯಿಯಾಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಬಿ.ಕೆ.ಸುಮಿತ್ರಾರವರು ‘ಹತ್ತು ವರ್ಷದ ಹಿಂದೆ’ ಹಾಡನ್ನು, ಪುತ್ತೂರು ನರಸಿಂಹನಾಯಕ್ ‘ನಿನ್ನೊಲುಮೆಯಿಂದಲೆ’ ಹಾಡನ್ನು, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ನಗರ ಶ್ರೀನಿವಾಸ ಉಡುಪ ಅವರು ‘ದೇವನಿನ್ನ ಮಾಯೆಗಂಜಿ’ ಹಾಗೂ ‘ಆಕಾಶಕ್ಕೆದ್ದುನಿಂತ ಗಿರಿವನಗಳ’ ಹಾಡುಗಳನ್ನು ಪ್ರಸ್ತುತಪಡಿಸಿದರು.