ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಯುವ ಜನತೆಯಲ್ಲಿದೆ: ಎಂ. ನರಸಿಂಹ
ಬೆಂಗಳೂರು, ಜ.26: ಉತ್ತಮ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಯುವ ಪೀಳಿಗೆಯ ಹೊಸ ಆಲೋಚನೆಗಳ ಪರಧಿಯೊಳಗಿದೆ ಎಂದು ಕಲಾ ಸಂಘದ ಗೌರವ ಕಾರ್ಯದರ್ಶಿ ಎಂ.ನರಸಿಂಹ ತಿಳಿಸಿದ್ದಾರೆ.
ಶನಿವಾರ ನಗರದ ಯುವ ಉದಯಭಾನು ಕಲಾ ಸಂಘದಲ್ಲಿ ಆಯೋಜಿಸಿದ್ದ, 70ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರ ಭದ್ರ ಬುನಾದಿಯ ಮೇಲೆ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ದೇಶ ಸುದೀರ್ಘ ಇತಿಹಾಸ ಹೊಂದಿದೆ. ಇಲ್ಲಿ ತ್ಯಾಗ ಬಲಿದಾನಗಳಿವೆ. ಅವುಗಳನ್ನು ಸ್ಮರಿಸುತ್ತಾ ಮುಂದಿನ ಕಾರ್ಯದೆಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅನೇಕ ರಾಷ್ಟ್ರ ನಾಯಕರ ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ ದೊರಕಿದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹೆಚ್ಚಾಗಿರುವುದಲ್ಲದೇ ಅದು ಅವರ ಜವಾಬ್ದಾರಿಯಾಗಿದೆ. ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದಯಭಾನು ಕಲಾಸಂಘದ ಅಧ್ಯಕ್ಷ ಬಿ.ಕೃಷ್ಣ ಮತ್ತಿತರರು ಭಾಗವಹಿಸಿದ್ದರು.