ಚಂದಾ ಕೊಚ್ಚರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದ ಸಿಬಿಐ ಅಧಿಕಾರಿಯ ವರ್ಗಾವಣೆ

Update: 2019-01-27 07:35 GMT

ಹೊಸದಿಲ್ಲಿ, ಜ.27: ಐಸಿಐಸಿಐ ಬ್ಯಾಂಕ್ ಸಾಲ ಮಂಜೂರಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದಲ್ಲಿ ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚರ್ ವಿರುದ್ಧ ಪ್ರಕರಣ ದಾಖಲಿಸಿದ್ದ ಸಿಬಿಐ ಅಧಿಕಾರಿಯನ್ನು ದಿಢೀರನೇ ವರ್ಗಾವಣೆ ಮಾಡಲಾಗಿದೆ.

ಬ್ಯಾಂಕಿನ ಮಾಜಿ ಎಂಡಿ ಮತ್ತು ಸಿಇಓ ಕೊಚಾರ್ ಹಾಗೂ ಆಕೆಯ ಪತಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಿಬಿಐನ ಬ್ಯಾಂಕಿಂಗ್ ಮತ್ತು ಭದ್ರತಾ ಪತ್ರಗಳ ವಂಚನೆ ಘಟಕದ ಪೊಲೀಸ್ ಅಧೀಕ್ಷಕರಾಗಿದ್ದ ಸುಧಾಂಶು ಧರ್ ಮಿಶ್ರಾ ಅವರನ್ನು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿರುವ ಸಿಬಿಐನ ಆರ್ಥಿಕ ಅಪರಾಧಗಳ ಶಾಖೆಗೆ ವರ್ಗಾಯಿಸಲಾಗಿದೆ.

ಐಸಿಐಸಿಐ- ವಿಡಿಯೊಕಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದಾ ಕೊಚ್ಚರ್, ದೀಪಕ್ ಕೊಚ್ಚರ್, ವೇಣುಗೋಪಾಲ್ ಧೂತ್ ಮತ್ತು ಇತರರ ವಿರುದ್ಧ ಜನವರಿ 22ರಂದು ಸಿದ್ಧಪಡಿಸಿದ್ದ ಎಫ್‍ಐಆರ್‍ಗೆ ಅವರು ಸಹಿಮಾಡಿದ್ದರು. ಜನವರಿ 24ರಂದು ಸಿಬಿಐ ಈ ಪ್ರಕರಣ ದಾಖಲಿಸಿಕೊಂಡಿತ್ತು.

ಚಂದಾ ಕೊಚ್ಚರ್ ಅವರು ಕಳೆದ ವರ್ಷದ ಅಕ್ಟೋಬರ್ 24ರಂದು ವಿಡಿಯೊಕೋನ್‍ಗೆ ಸಾಲ ಮಂಜೂರು ಮಾಡುವಲ್ಲಿ ಅಕ್ರಮ ಎಸಗಿದ ಆರೋಪ ಬಂದ ಹಿನ್ನೆಲೆಯಲ್ಲಿ ಹುದ್ದೆ ತೊರೆದಿದ್ದರು. ಈ ಕಂಪನಿಯ ಸಂಸ್ಥಾಪಕರು, ಚಂದಾ ಕೊಚ್ಚರ್ ಅವರ ಪತಿ ದೀಪಕ್ ಕೊಚ್ಚರ್ ಅವರ ಕಂಪನಿಯಲ್ಲೂ ಹೂಡಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಸ್ವಜನ ಪಕ್ಷಪಾತದ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News