ಗಂಡ ಹೆಂಡತಿಯನ್ನು ಕೊಲೆಗೈದ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್

Update: 2019-01-27 13:54 GMT

ಬೆಂಗಳೂರು, ಜ.27: ಗಂಡ ಹೆಂಡತಿಯನ್ನು ಪ್ರತ್ಯೇಕವಾಗಿ ಕೊಲೆಗೈದು ಸುಮಾರು 250 ಗ್ರಾಂ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ದೋಚಿದ್ದ ಪ್ರಕರಣ ಸಂಬಂಧ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್, ಓರ್ವನನ್ನು ಖುಲಾಸೆಗೊಳಿಸಿದೆ.

ಪ್ರೀತಮ್, ವಿವೇಕ್ ಶಿಕ್ಷೆಗೆ ಗುರಿಯಾಗಿದವರು. ಪ್ರದೀಪ್ ಛತ್ರಿ ಖುಲಾಸೆಯಾದವ. ಪ್ರಕರಣದಲ್ಲಿ ತಮ್ಮನ್ನು ದೋಷಿಗಳಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ನಗರದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಲು ಕೋರಿ ಪ್ರೀತಮ್, ವಿವೇಕ್ ಮತ್ತು ಪ್ರದೀಪ್ ಛತ್ರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. ತೀರ್ಪು ಪ್ರಕಟಿಸಿದ ನ್ಯಾಯಪೀಠವು ಪ್ರೀತಮ್ ಹಾಗೂ ವಿವೇಕ್ ಅವರನ್ನು ತಪ್ಪಿತಸ್ಥರು ಎಂದು ತಿಳಿಸಿ ಅವರಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿತು. ಪ್ರದೀಪ್ ಛತ್ರಿ ನಿರ್ದೋಷಿ ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದೆ.

ಪ್ರಕರಣವೇನು: ಅಮೃತ್ ರಾಯ್ ಮತ್ತು ಪತ್ನಿ ಜಾನಕಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪ್ರೀತಮ್ ಹಾಗೂ ವಿವೇಕ್ 2010ರ ಜ.1ರಂದು ಅಮೃತ್ ರಾಯ್‌ನನ್ನು ಆತನ ಮನೆಯಿಂದ ಕಾರಿನಲ್ಲಿ ಅಗರ ಕೆರೆ ಬಳಿಗೆ ಕರೆದೊಯ್ದು ಕೊಲೆ ಮಾಡಿದ್ದರು. ಮೃತದೇಹವನ್ನು ಕೆರೆಗೆ ಬಿಸಾಡಿ, ನಂತರ ಅಮೃತ್ ರಾಯ್ ಮನೆಗೆ ಹಿಂದಿರುಗಿದ್ದ ಅವರು, ಜಾನಕಿಯ ಕತ್ತು ಕೊಯ್ದು ಹತ್ಯೆ ಮಾಡಿದರು. ಹಾಗೆಯೇ, ಮನೆಯಲ್ಲಿದ್ದ ಸುಮಾರು 250 ಗ್ರಾಂ ಚಿನ್ನಾಭರಣ, ಮೂರು ಬೆಳ್ಳಿ ಕೀ ಚೈನ್, ನಾಲ್ಕು ಡೆಬಿಟ್ ಕಾರ್ಡ್ ಹಾ ಗೂ ಎರಡು ಕ್ರೆಡಿಟ್ ಕಾರ್ಡ್ ದೋಚಿ ಪರಾರಿಯಾಗಿದ್ದರು. ಮರು ದಿನ ಅಮೃತ್ ರಾಯ್ ಮೃತದೇಹ ಕೆರೆಯಲ್ಲಿ ತೇಲುತ್ತಿದ್ದನ್ನು ಕಂಡ ವ್ಯಕ್ತಿಯೊಬ್ಬ, ಪೊಲೀಸರಿಗೆ ಮಾಹಿತಿ ನೀಡಿದ್ದ. ಅಮೃತ್ ರಾಯ್ ಜೇಬಿನಲ್ಲಿ ಆತನ ಮನೆಯ ವಿಳಾಸದ ಮಾಹಿತಿ ದೊರೆತ ಕಾರಣಕ್ಕೆ ವಿಷಯ ಮುಟ್ಟಿಸಲು ಪೊಲೀಸರು ಮನೆಗೆ ಹೋದಾಗ, ಅಲ್ಲಿ ಪತ್ನಿ ಜಾನಕಿ ಕೊಲೆಯಾದ ವಿಚಾರ ಬಯಲಾಯಿತು. ಹೀಗಾಗಿ ಮನೆ ಮಾಲಕರು ಎಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ್ದ ಎಚ್‌ಎಸ್‌ಆರ್ ಲೇಔಟ್ ಠಾಣಾ ಪೊಲೀಸರು ಸಂತೋಷ್, ಪ್ರೀತಮ್, ಪ್ರದೀಪ್ ಛತ್ರಿ ಮತ್ತು ವಿವೇಕ್ ಅವರನ್ನು ಬಂಧಿಸಿ, ದೋಚಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದರು. ರಾಜಶೇಖರ್ ಎಂಬಾತ ಆರೋಪಿಗಳು ಅಮೃತ್ ರಾಯ್‌ಗೆ ಪರಿಚಯವಿದ್ದು, ಆತನ ಮನೆಗೆ ಹಲವು ಬಾರಿ ಭೇಟಿ ನೀಡಿದ್ದ ಬಗ್ಗೆ ಅಧೀನ ನ್ಯಾಯಾಲಯಕ್ಕೆ ಸಾಕ್ಷ ನುಡಿದ್ದರು. ಅಧೀನ ನ್ಯಾಯಾಲಯ ನಾಲ್ವರನ್ನು ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿ 2014 ಸೆ.19ರಂಂದು ಆದೇಶ ಹೊರಡಿಸಿತ್ತು. ಇದರಿಂದ ಸಂತೋಷ ಹೊರತುಪಡಿಸಿ ಉಳಿದ ಮೂವರು ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರದೀಪ್ ಛತ್ರಿ ಪರ ವಕೀಲ ಆರ್.ಪಿ.ಚಂದ್ರಶೇಖರ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News