ರಾಜಕಾರಣ ಎಂದರೆ ಮತ್ತೊಬ್ಬರನ್ನು ಬೈಯುವುದು: ಮಹಿಮಾ ಪಟೇಲ್

Update: 2019-01-27 13:58 GMT

ಬೆಂಗಳೂರು, ಜ.27: ರಾಜಕಾರಣ, ರಾಜಕಾರಣಿಗಳು ಎಂದರೇ ಮತ್ತೊಬ್ಬರನ್ನು ಬೈಯುವುದು, ಕಾಲೆಳೆಯುವುದು ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ. ಈ ಅಭಿಪ್ರಾಯವನ್ನು ಹೋಗಲಾಡಿಸಲು ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳ ಅನ್ನ ದಾಸೋಹ, ಜ್ಞಾನಾರ್ಜನೆ ಹಾಗೂ ಕಾಯಕ ಎಂಬ ತತ್ವಾದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಜೆಡಿಯು ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸೋಣ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಕರೆ ನೀಡಿದ್ದಾರೆ.

 ರವಿವಾರ ನಗರದ ಗಾಂಧಿ ಭವನದಲ್ಲಿ ಯುವ ಜನತಾದಳ(ಸಂಯುಕ್ತ) ಕರ್ನಾಟಕ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಹಾಗೂ ಯುವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು 1999ರಲ್ಲಿ ಜೆಡಿಯು ಪಕ್ಷದ ಅಧ್ಯಕ್ಷರಾಗಿದ್ದರು. ಈಗ ನಾನು ಈ ಪಕ್ಷದ ಅಧ್ಯಕ್ಷನಾಗಿದ್ದೇನೆ. ಈ ಪಕ್ಷವನ್ನು ಸಂಘಟಿಸುವುದಕ್ಕಾಗಿ ಹಾಗೂ ರಾಜಕಾರಣಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವುದಕ್ಕಾಗಿ ಡಾ.ಶಿವಕುಮಾರಸ್ವಾಮೀಜಿಗಳ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಬಿಹಾರ ರಾಜ್ಯದಲ್ಲಿ ಜೆಡಿಯು ಪಕ್ಷ ಅಧಿಕಾರದಲ್ಲಿದ್ದು ಆ ರಾಜ್ಯ ಈಗ ಹಂತ ಹಂತವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಅದೇ ರೀತಿಯಾಗಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿರುವ ಕರ್ನಾಟಕವನ್ನೂ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಿಸಲು ಮಾಜಿ ಮುಖ್ಯಮಂತ್ರಿಗಳಾದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಅವರು ಮೈಗೂಡಿಸಿಕೊಂಡಿದ್ದ ಪ್ರಮಾಣಿಕತೆ ಹಾಗೂ ಅಭಿವೃದ್ಧಿಯ ದೂರದೃಷ್ಠಿಯನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಶಿವಕುಮಾರ ಸ್ವಾಮಿಜಿಗಳನ್ನು ನಾನು ಇಂಜಿನಿಯರಿಂಗ್ ಓದುತ್ತಿರುವಾಗ ಅಂದರೆ 70ನೆ ವರ್ಷದಿಂದ 111 ವರ್ಷದವರೆಗೆ ನೋಡಿದ್ದೇನೆ. ಅವರ ದಾಸೋಹ, ಜ್ಞಾನ, ಕೆಲಸದ ಶ್ರದ್ಧೆ ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸಂಜಯ್‌ಕುಮಾರ್, ಯುವ ಜೆಡಿಯು ರಾಜ್ಯಾಧ್ಯಕ್ಷ ಕೆ.ವಿ.ಶಿವರಾಮ್, ರಾಮಯ್ಯ, ಶಿವರುದ್ರಯ್ಯ, ಶಕುಂತಲಾ ಶೆಟ್ಟಿ, ರಾಜಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News