ಕ್ರಿಶ್ಚಿಯನ್ ಮದರ್ ತೆರೆಸಾಗೆ ನೀಡಿದ ‘ಭಾರತರತ್ನ’ ಸಾಧುಗಳಿಗೆ ಯಾಕಿಲ್ಲ: ಬಾಬಾ ರಾಮ್‌ದೇವ್

Update: 2019-01-27 17:09 GMT

ಹೊಸದಿಲ್ಲಿ, ಜ. 28: ಸ್ವಾತಂತ್ರ್ಯ ದೊರಕಿ 70 ವರ್ಷ ಕಳೆದ ಬಳಿಕವೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಸಾಧುಗಳಿಗೆ ಯಾವುದೇ ರಾಷ್ಟ್ರೀಯ ಪ್ರಶಸ್ತಿ ನೀಡಿಲ್ಲ ಎಂದು ಹೇಳುವ ಮೂಲಕ ಯೋಗ ಗುರು ಬಾಬಾ ರಾಮ್ ದೇವ್ ಭಾರತ ರತ್ನ ಪ್ರಶಸ್ತಿ ಬಗ್ಗೆ ವಿವಾದ ಹುಟ್ಟು ಹಾಕಿದ್ದಾರೆ.

ಈ ವಿಷಯದ ಬಗ್ಗೆ ನಿಮಗೆ ಸರಕಾರದ ಮೇಲೆ ದ್ವೇಷ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾನು ಹಾಗೆ ಹೇಳಲಾರೆ...ನಾನು ಸರಳವಾಗಿ ಇದನ್ನು ಗುರುತಿಸಿದ್ದೇನೆ’’ ಎಂದಿದ್ದಾರೆ. ನೀವು 2019 ಸಾರ್ವತ್ರಿಕ ಚುನಾವಣೆಯ ಸಂದರ್ಭ ಬಿಜೆಪಿ ಪರ ಪ್ರಚಾರ ನಡೆಸಲಿದ್ದೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾನೇಕೆ ಪ್ರಚಾರ ನಡೆಸಲಿ’’ ಎಂದು ಹೇಳಿದ್ದಾರೆ. ಅಲಹಾಬಾದ್‌ನಲ್ಲಿ ಕುಂಭಮೇಳದಲ್ಲಿ ಮಾತನಾಡಿದ ರಾಮ್‌ದೇವ್, ದೇಶ ಕಟ್ಟುವಲ್ಲಿ ಕೊಡುಗೆ ನೀಡಿರುವುದಕ್ಕಾಗಿ ಭಾರತ ರತ್ನ ಪ್ರಶಸ್ತಿ ಪಡೆದಿರುವರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ, ದೇಶದ ಅತ್ಯುಚ್ಛ ಪ್ರಶಸ್ತಿಯಾದ ಭಾರತರತ್ನವನ್ನು ಯಾವೊಬ್ಬ ಯೋಗಿಯೂ ಪಡೆಯದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

‘‘ಇದುವರೆಗೆ ಯಾವೊಬ್ಬ ಸನ್ಯಾಸಿಯೂ ಭಾರತ ರತ್ನ ಪ್ರಶಸ್ತಿ ಯಾಕೆ ಪಡೆದಿಲ್ಲ? ಯಾವುದೇ ರಾಜಕೀಯ ನಾಯಕರು ಅಥವಾ ಕ್ರೀಡಾ ವ್ಯಕ್ತಿಗಳಿಗಿಂತ ಮಹರ್ಷಿ ದಯಾನಂದ ಸರಸ್ವತಿ ಅಥವಾ ಸ್ವಾಮಿ ವಿವೇಕಾನಂದರು ದೇಶಕ್ಕೆ ನೀಡಿದ ಕೊಡುಗೆ ಸಣ್ಣದಲ್ಲ’’ ಎಂದು ಅವರು ಹೇಳಿದ್ದಾರೆ. ‘‘ಮದರ್ ತೆರೆಸಾ ಕ್ರಿಶ್ಚಿಯನ್ ಆದುದರಿಂದ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ಆದರೆ, ಹಿಂದೂಗಳಾಗಿರುವುದರಿಂದ ಇತರ ಸನ್ಯಾಸಿಗಳಿಗೆ ಅವರು ಈ ಪ್ರಶಸ್ತಿ ನೀಡುತ್ತಿಲ್ಲ. ಈ ದೇಶದಲ್ಲಿ ಹಿಂದೂ ಆಗಿರುವುದೇ ಅಪರಾಧವೇ?’’ ಎಂದು ರಾಮ್ ದೇವ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News