ಪಾವೂರು ಉಳಿಯ ದ್ವೀಪ ಸಂಪರ್ಕಕ್ಕೆ ಕಬ್ಬಿಣದ ಸೇತುವೆ ನಿರ್ಮಾಣ

Update: 2019-01-28 14:01 GMT

►ಕಳೆದ ಹಲವು ವರ್ಷದಿಂದ ನಾವು ಮೂಲಭೂತ ಸೌಕರ್ಯಕ್ಕಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆದಾಗ್ಯೂ ಹೊರಗಿನ ಸಂಪರ್ಕಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ಪ್ರತೀ ವರ್ಷವೂ ನಿರ್ಮಿಸಿಕೊಂಡು ಬಂದೆವು. ಬೇರೆ ಬೇರೆ ಕಾರಣದಿಂದ ಜನರು ಇಲ್ಲಿಂದ ವಲಸೆ ಹೋದರು. ಹಾಗಾಗಿ ವರ್ಷಂಪ್ರತಿ ಹಣ ಸಂಗ್ರಹ ಕೂಡ ಸಮಸ್ಯೆಯಾಗತೊಡಗಿತು. ಆದಾಗ್ಯೂ ಹಲವರಿಂದ ಹಣ ಸಂಗ್ರಹಿಸಿ 10 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದೇವೆ. ಇದಕ್ಕೆ ಸ್ಥಳೀಯ ಯುವಕರ ಶ್ರಮ ಕೂಡಾ ಅಪಾರ. ನಾವಿನ್ನೂ ನಿರಾಶರಾಗಲಿಲ್ಲ. ಜನಪ್ರತಿನಿಧಿಗಳು ಖಂಡಿತಾ ಒಂದಲ್ಲೊಂದು ದಿನ ಈ ದ್ವೀಪದ ಜನರ ಸಮಸ್ಯೆ ನೀಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಫಾ.ಜೆರಾಲ್ಡ್ ತಿಳಿಸಿದ್ದಾರೆ.

►ಅಂದಹಾಗೆ ಇಲ್ಲೊಂದು ಶಾಲೆಯೂ ಇತ್ತು. 5ನೇ ತರಗತಿಯವರೆಗೆ ಇದ್ದ ಈ ಪ್ರಾರ್ಥಮಿಕ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರಿದ್ದರೂ ಕೂಡ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ ಶಿಕ್ಷಕಿಯರಿಗೆ ಶಾಲೆಗೆ ತೆರಳಲು ತೊಂದರೆಯಾದ ಕಾರಣ ಉಪಾಯವಿಲ್ಲದೆ ಊರವರು ತಮ್ಮ ಮಕ್ಕಳನ್ನು ದ್ವೀಪದಾಚೆಯ ಶಾಲೆಗಳಿಗೆ ಸೇರಿಸತೊಡಗಿದರು. ಮಕ್ಕಳ ಕೊರತೆಯಿಂದಾಗಿ ಈ ಶಾಲೆಯನ್ನು ಕೆಲವು ವರ್ಷದ ಹಿಂದೆಯೇ ಮುಚ್ಚಲಾಗಿತ್ತು.

ಮಂಗಳೂರು, ಜ.27: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮದ ‘ಉಳಿಯ’ ದ್ವೀಪಕ್ಕೆ ಶಾಶ್ವತ ಸೇತುವೆ ನಿರ್ಮಾಣದ ಭರವಸೆ ಈಡೇರದ ಕಾರಣ ಸೇತುವೆಗಾಗಿ ಕಾದು ಬೇಸತ್ತ ಸ್ಥಳೀಯರು ಸ್ವತಃ ಕಬ್ಬಿಣದ ಸೇತುವೆ ನಿರ್ಮಿಸಿ ಜನಪ್ರತಿನಿಧಿಗಳನ್ನು ಅಣಕಿಸುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಬಲ್ಲೆವು ಎಂಬುದನ್ನು ಅಲ್ಲಿಯ ಯುವಕರು ತೋರಿಸಿಕೊಟ್ಟಿದ್ದಾರೆ. ರಾ.ಹೆದ್ದಾರಿ 75ರ ಅಡ್ಯಾರ್ ಸಮೀಪದ ನೇತ್ರಾವತಿ ನದಿಯ ಮಧ್ಯೆ ಇರುವ ‘ಉಳಿಯ’ ದ್ವೀಪವಿದೆ. ಮಂಗಳೂರು ತಾಲೂಕಿನ ಪಾವೂರು ಗ್ರಾಮ ವ್ಯಾಪ್ತಿಯಲ್ಲಿರುವ ಈದ್ವೀಪವು ಸುಮಾರು 100 ಎಕರೆ ವಿಸ್ತೀರ್ಣ ಹೊಂದಿದೆ. ನೂರಾರು ವರ್ಷಗಳಿಂದ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೈಸ್ತರು ನೆಲೆಸುತ್ತಿದ್ದಾರೆ. ಈ ಹಿಂದೆ ಇಲ್ಲಿ 49 ಮನೆಗಳಿತ್ತು. ಸಂಪರ್ಕಕ್ಕೆ ದೋಣಿಯ ಹೊರತು ಬೇರೆ ಮಾರ್ಗವೇ ಇಲ್ಲ. ಸುಮಾರು 18 ವರ್ಷದಿಂದ ಊರವರು ಸ್ವತಃ ಹಣ ಸಂಗ್ರಹಿಸಿ ಬಿದಿರು ಅಥವಾ ಹಲಗೆ ಬಳಸಿಕೊಂಡು ತಾತ್ಕಾಲಿಕ ಸೇತುವೆ ನಿರ್ಮಿಸುತ್ತಿದ್ದರು. ಇದಕ್ಕೆ ಅಂದಾಜು 70 ಸಾವಿರ ರೂ.ವರ್ಷಂಪ್ರತಿ ಖರ್ಚು ಮಾಡುತ್ತಿದ್ದರು. ಆದರೂ ಸಂಪರ್ಕದ ಸಮಸ್ಯೆ ನೀಗುತ್ತಿರಲಿಲ್ಲ. ಆ ಕಾರಣಕ್ಕೇ ಹಲವರು ಕಾಲಕ್ರಮೇಣ ಗುಳೇ ಹೊರಟರು. ಸದ್ಯ ಇಲ್ಲಿ ಸುಮಾರು 21 ಕುಟುಂಬಸ್ಥರು ವಾಸವಾಗಿದ್ದಾರೆ. ಒಂದು ಚರ್ಚ್ ಕೂಡಾ ಇಲ್ಲಿದ್ದು, ಫರಂಗಿಪೇಟೆಯಿಂದ ಧರ್ಮಗುರುವೊಬ್ಬರು ಚರ್ಚ್‌ಗೆ ತೆರಳಿ ವಾರದ ಪ್ರಾರ್ಥನೆ ನೆರವೇರಿಸಿಕೊಡುತ್ತಾರೆ. ದ್ವೀಪದ ಒಂದು ಕಡೆಯಿಂದ ಅಡ್ಯಾರ್ ಮೂಲಕ ಮಂಗಳೂರು-ಬಿ.ಸಿ.ರೋಡ್ ತಲುಪಲು ಸಾಧ್ಯವಾದರೂ ಕೂಡ ಪಾವೂರು ಗ್ರಾಪಂ ಕಚೇರಿ ತಲುಪಲು ಇನ್ನೊಂದು ಬದಿಯಲ್ಲಿ ದೋಣಿಯನ್ನು ಆಶ್ರಯಿಸಬೇಕಿದೆ. ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಮತ್ತು ಪಡಿತರ ಸಾಮಗ್ರಿ ತರಲು ದೋಣಿ ಹತ್ತಿ ಗಾಡಿಗದ್ದೆಯನ್ನು ತಲುಪಬೇಕು. ಅಲ್ಲಿಂದ ರಿಕ್ಷಾದ ಮೂಲಕ ಪಾವೂರು ಮಲಾರ್ ಜಂಕ್ಷನ್ ತಲುಪಿದರೆ ಮಾತ್ರ ಗ್ರಾಪಂ ಕಚೇರಿಯ ಮೆಟ್ಟಲು ಹತ್ತಬಹುದು.

ಕಳೆದ ಕೆಲವು ವರ್ಷಗಳಿಂದ ಹಣ ಹೊಂದಿಸಲಾಗದೆ ಗೋಣಿಚೀಲದಲ್ಲಿ ಮರಳು ತುಂಬಿಸಿ ರಸ್ತೆ ಮಾದರಿ ಮಾಡಿ ಅದರಲ್ಲಿ ನದಿ ದಾಟುವ ಸಾಹಸ ಮಾಡುತ್ತಿದ್ದರು. ಇಳಿತದ ಸಂದರ್ಭ ಅಪಾಯಕಾರಿಯಾಗದಿದ್ದರೂ ಏತದ ವೇಳೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಹ ಸ್ಥಿತಿ ಇತ್ತು.

ಈ ಮಧ್ಯೆ ಈ ದ್ವೀಪದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ಅದರಲ್ಲೂ ನಿಕಟಪೂರ್ವ ಜಿಪಂ ಸಿಇಒ ಡಾ.ಎಂ.ಆರ್.ರವಿ ವಿಶೇಷ ಆಸಕ್ತಿ ವಹಿಸಿ ಸ್ಥಳೀಯ ಜನಪ್ರತಿನಿಧಿಗಳನ್ನು ದ್ವೀಪದಲ್ಲಿ ಸೇರಿಸಿಕೊಂಡು ಸಾರ್ವಜನಿಕ ಜನಸಂಪರ್ಕ ಸಭೆ ನಡೆಸಿದರು. ಈ ಸಂದರ್ಭ ಜನಪ್ರತಿನಿಧಿಗಳು ‘ಶಾಶ್ವತ ಸೇತುವೆ ನಿರ್ಮಾಣ’ದ ಆಶ್ವಾಸನೆ ನೀಡಿದರು. ತನ್ಮಧ್ಯೆ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಕೂಡ ದ್ವೀಪಕ್ಕೆ ತೆರಳಿ ಪ್ರದೇಶಾಭಿವೃದ್ಧಿಯ ಪಣ ತೊಟ್ಟಿದ್ದರು. ಆದರೆ, ಯಾವ ಭರವಸೆ ಮತ್ತು ಕನಸು ಕೂಡ ಈಡೇರದ ಕಾರಣ ಸ್ಥಳೀಯ ಚರ್ಚ್ ಧರ್ಮಗುರು ಫಾ.ಜೆರಾಲ್ಡ್ ಮುತುವರ್ಜಿಯಿಂದ ಐಸಿವೈಎಂ ಶ್ರಮದಾನದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ 800 ಮೀಟರ್ ಉದ್ದದ ಕಬ್ಬಿಣದ ಸೇತುವೆ ನಿರ್ಮಿಸಲಾಗಿದೆ. ಇದು ಸುರಕ್ಷಿತವಾದರೂ ಕೂಡ ಮಳೆಗಾಲದಲ್ಲಿ ಸಮಸ್ಯೆಯಾಗಬಹುದು ಎಂಬ ಅಭಿಪ್ರಾಯವು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.

Full View

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News