ಸತುವು ಸಮೃದ್ಧವಾಗಿರುವ ಆಹಾರಗಳು…

Update: 2019-01-28 14:46 GMT

ಶರೀರದಲ್ಲಿ ಝಿಂಕ್ ಅಥವಾ ಸತುವಿನ ಕೊರತೆಯು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಅಮೆರಿಕದ ರೈಟ್ ಸ್ಟೇಟ್ ವಿವಿಯ ಇತ್ತೀಚಿನ ಅಧ್ಯಯನವೊಂದು ಬಹಿರಂಗಗೊಳಿಸಿದೆ. ಪೋಷಕಾಂಶವಾಗಿರುವ ಸತುವು ಶರೀರದ ಮೇಲೆ ದಾಳಿಯಿಡುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುವಲ್ಲಿ ರೋಗ ನಿರೋಧಕ ವ್ಯವಸ್ಥೆಗೆ ನೆರವಾಗುತ್ತದೆ.

ನಮ್ಮ ಮೂತ್ರಪಿಂಡಗಳು ಸೋಡಿಯಂ ಅನ್ನು ವಿಸರ್ಜಿಸುವ ಮತ್ತು ಶರೀರದಿಂದ ಅದನ್ನು ಮರುಹೀರಿಕೊಳ್ಳುವ ರೀತಿಯು ನಮ್ಮ ರಕ್ತದೊತ್ತಡದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ. ಸತುವಿನ ಕೊರತೆಯು ಲಕ್ಷಾಂತರ ಜನರನ್ನು ,ವಿಶೇಷವಾಗಿ ಟೈಪ್-1 ಮಧುಮೇಹ ಅಥವಾ ದೀರ್ಘಕಾಲಿಕ ಮೂತ್ರಪಿಂಡ ರೋಗದಿಂದ ಬಳಲುತ್ತಿರುವವರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.

ಸತುವು ಸಮೃದ್ಧವಾಗಿರುವ ಆಹಾರಗಳು

ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ರೋಗ ನಿರೋಧಕ ಶಕ್ತಿಯ ಬೆಳವಣಿಗೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ಸತುವು ಪ್ರಮುಖ ಪಾತ್ರವನ್ನು ಹೊಂದಿದೆ. ಸತುವಿನ ಕೊರತೆಯು ತಲೆಗೂದಲು ಉದುರುವಿಕೆ,ಚರ್ಮದ ಸೋಂಕುಗಳು ಇತ್ಯಾದಿ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸತುವು ಸಮೃದ್ಧವಾಗಿರುವ ಕೆಲವು ಆಹಾರಗಳ ಮಾಹಿತಿ ಇಲ್ಲಿದೆ...

ಮೊಟ್ಟೆ: ಮೊಟ್ಟೆಯ ಹಳದಿ ಭಾಗವು ಸತುವಿನ ಆಗರವಾಗಿದ್ದು, ಈ ಖನಿಜಾಂಶದ ಕೊರತೆಯಿಂದ ಶರೀರವನ್ನು ಕಾಡುವ ಸೋಂಕುಗಳು ಮತ್ತು ಇತರ ಕಾಯಿಲೆಗಳನ್ನು ದೂರವಿಡಲು ನೆರವಾಗುತ್ತದೆ.

ಧಾನ್ಯಗಳು: ಧಾನ್ಯಗಳು ನಮ್ಮ ಶರೀರಕ್ಕೆ ದಿನನಿತ್ಯ ಅಗತ್ಯವಾಗಿರುವ ಸತುವನ್ನು ಒದಗಿಸುತ್ತವೆ. ಅವು ವಿಟಾಮಿನ್‌ಗಳು ಮತ್ತು ಖನಿಜಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿವೆ.

ಮಾಂಸ: ವಾರಕ್ಕೆರಡು ಬಾರಿ ಮಾಂಸವನ್ನು ಸೇವಿಸುವುದರಿಂದ ಶರೀರದಲ್ಲಿಯ ಸತುವಿನ ಕೊರತೆ ನೀಗುತ್ತದೆ. ಬೀಫ್,ಮಟನ್ ಮತ್ತು ಕೋಳಿಯ ಮಾಂಸ ಸಾಕಷ್ಟು ಸತುವನ್ನು ಒಳಗೊಂಡಿವೆ. ಆದರೆ ಇವು ಅಧಿಕ ಕೊಲೆಸ್ಟ್ರಾಲ್ ಮತ್ತು ಕೊಬ್ಬುಗಳನ್ನೂ ಒಳಗೊಂಡಿರುವುದರಿಂದ ಇವುಗಳ ಸೇವನೆಯ ಬಳಿಕ ವ್ಯಾಯಾಮ ಅಗತ್ಯವಾಗಿದೆ.

ಕುಂಬಳ ಬೀಜಗಳು: 100 ಗ್ರಾಂ. ಕುಂಬಳದ ಬೀಜಗಳನ್ನು ನಿಯಮಿತವಾಗಿ ತಿನ್ನುವುದರಿಂದ ಶರೀರಕ್ಕೆ ಪ್ರತಿನಿತ್ಯ ಅಗತ್ಯವಾಗಿರುವ ಸತುವು ದೊರೆಯುತ್ತದೆ. ಇವುಗಳ ಅತ್ಯುತ್ತಮ ಲಾಭವನ್ನು ಪಡೆಯಲು ಹಸಿಯಾಗಿಯೇ ತಿನ್ನಬೇಕು.

ಬೆಳ್ಳುಳ್ಳಿ: ಬೆಳ್ಳುಳ್ಳಿಯು ನಮ್ಮ ಶರೀರವನ್ನು ವಿವಿಧ ಕಾಯಿಲೆಗಳಿಂದ ದೂರವಿಡಲು ನೆರವಾಗುವ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಸತುವು ಸಾಕಷ್ಟು ಪ್ರಮಾಣದಲ್ಲಿದ್ದು,ಮ್ಯಾಂಗನೀಸ್,ವಿಟಾಮಿನ್ ಬಿ6,ವಿಟಾಮಿನ್ ಸಿ ಮತ್ತು ಸೆಲೆನಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News