×
Ad

ದಿಲ್ಲಿ ಮಾದರಿ ಶಾಲಾ ಶಿಕ್ಷಣ: ಬಜೆಟ್‌ನಲ್ಲಿ ಶೇ.25 ರಷ್ಟು ಹಣ ಮೀಸಲಿಡಲು ಆಗ್ರಹ

Update: 2019-01-28 23:19 IST

ಬೆಂಗಳೂರು, ಜ. 28: ದಿಲ್ಲಿ ಸರಕಾರದ ಮಾದರಿಯಲ್ಲೇ ಶಾಲಾ ಶಿಕ್ಷಣಕ್ಕೆ ಆಯವ್ಯಯದಲ್ಲಿ ಕನಿಷ್ಠ ಶೇ.25ರಷ್ಟು ಹಣವನ್ನು ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಸ್ಥಾಪಕ ಡಾ.ವಿ.ಪಿ.ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.

ಶಿಕ್ಷಣ ಸಾಮಾಜಿಕ ಒಳಿತು ಎಂಬ ಹಿನ್ನೆಲೆಯಲ್ಲಿ ಅದನ್ನು ಸಾಕಾರಗೊಳಿಸುವ ಭಾಗವಾಗಿ ಸರಕಾರ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು. ಸಾರ್ವಜನಿಕ ಶಿಕ್ಷಣ ಸಾಮಾಜಿಕ ಒಳಿತು ಮತ್ತು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿಯ ಸಾಧನವೆಂದು ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು ಇಂಗ್ಲಿಷ್‌ನ್ನು ಒಂದು ಭಾಷೆಯನ್ನಾಗಿ ಪ್ರಭುತ್ವದ ಮಟ್ಟಕ್ಕೆ ಕಲಿಯಲು ಸಹಾಯವಾಗುವಂತೆ ಪ್ರತೀ ಸರಕಾರಿ ಶಾಲೆಯಲ್ಲಿ ಸಮರ್ಥ ಆಂಗ್ಲ ಶಿಕ್ಷಕರನ್ನು ನೇಮಿಸುವ ಬಗ್ಗೆ ಆಯವ್ಯಯದಲ್ಲಿ ಘೋಷಿಸಬೇಕು.

ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಹುಟ್ಟಿನಿಂದ 18 ವರ್ಷದ ಎಲ್ಲ ಮಕ್ಕಳಿಗೆ ವರ್ಗ ಭೇದ, ಜಾತಿ ಧರ್ಮ ಸಾಮಾಜಿಕ- ಆರ್ಥಿಕ ಬೇಧ-ಭಾವವಿಲ್ಲದೆ ಗುಣಾತ್ಮಕ ಶಿಕ್ಷಣ ನೀಡಬೇಕು. ನೆರೆಹೊರೆಯ ಸಮಾನ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಶಿಕ್ಷಣವನ್ನು ಮಾರುಕಟ್ಟೆಯ ಸರಕನ್ನಾಗಿಸುವ ಪ್ರಯತ್ನಗಳನ್ನು ಸರಕಾರ ಹತ್ತಿಕ್ಕಬೇಕು ಮತ್ತು ಕನಿಷ್ಠ 12ನೆ ತರಗತಿ ವರೆಗೆ ಶಿಕ್ಷಣದಲ್ಲಿ ಖಾಸಗಿಯವರ ಪ್ರವೇಶ ಹಾಗೂ ಹೂಡಿಕೆ ರದ್ದುಪಡಿಸಬೇಕು. ಶಿಕ್ಷಣವನ್ನು ದೇಶದ ಅಭಿವೃದ್ಧಿಯ ಪ್ರಮುಖ ಸಾಧನವೆಂದು ಪರಿಗಣಿಸಿ ರಾಷ್ಟ್ರೀಕರಣ ಗೊಳಿಸಬೇಕೆಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News