ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಉಳಿಸುವಂತೆ ಕೆಎಸ್‌ಸಿಡಬ್ಲೂಸಿಯು ಒತ್ತಾಯ
ಬೆಂಗಳೂರು, ಜ.28: ಕಟ್ಟಡ ಕಾರ್ಮಿಕರ ಕಾಯಿದೆಗಳು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಉಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ನೌಕರರ ಕೇಂದ್ರ ಒಕ್ಕೂಟವು ಜ.31 ರಂದು ಪುರಸಭೆ ಮುಂದೆ ಧರಣಿ ಮುಷ್ಕರವನ್ನು ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎನ್.ಪಿ.ಸ್ವಾಮಿ, ಕೇಂದ್ರ ಸರಕಾರ ಕಾರ್ಮಿಕ ಕಾನೂನಗಳನ್ನು ಸರಳೀಕರಿಸುವ ಉದ್ದೇಶದಿಂದ ದೇಶದಲ್ಲಿರುವ ಹಲವಾರು ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಕೇತಗಳಾಗಿ ವಿಂಗಡಿಸುತ್ತಿದೆ. ಅವುಗಳೆಂದರೆ ಕಾರ್ಮಿಕ ವೇತನ ಸಂಕೇತ, ಕಾರ್ಮಿಕ ಔದ್ಯೋಗಿಕ ಸಂಬಂಧಗಳ ಸಂಕೇತ, ಸಾಮಾಜಿಕ ಭದ್ರತಾ ಹಾಗೂ ಕಲ್ಯಾಣ ಸಂಕೇತ ಮತ್ತು ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತ ಕೆಲಸದ ನಿಯಮಗಳ ಸಂಕೇತ. ಇವುಗಳಿಂದ ಒಟ್ಟು 45 ಕಾರ್ಮಿಕ ಶಾಸನಗಳು ರದ್ದಾಗುವ ಸಾಧ್ಯತೆಯಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಕಟ್ಟಡ ಕಾರ್ಮಿಕರ ಕಾಯಿದೆಗಳು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗಳು ರದ್ದಾದ ಪಕ್ಷದಲ್ಲಿ ರಾಜ್ಯದ 13 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಒಟ್ಟು ದೇಶದಲ್ಲಿರುವ 2.5 ಕೋಟಿ ಕಾರ್ಮಿಕರು ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಆರೋಪಿಸಿದರು.
ಆದ್ದರಿಂದ ಕೇಂದ್ರ ಸರಕಾರ ನಾಲ್ಕು ಸಂಕೇತ ವಿಲೀನಗೊಳಿಸುತ್ತಿರುವುದನ್ನು ವಿರೋಧಿಸುವ ಮೂಲಕ ಕಲ್ಯಾಣ ಮಂಡಳಿಯನ್ನು ಉಳಿಸಿ, ಮಂಡಳಿಯನ್ನು ಉತ್ತಮಪಡಿಸುವಂತೆ ಆಗ್ರಹಿಸಿ, ಫೆ.7 ರಂದು ನ್ಯಾಷನಲ್ ಕ್ಯಾಂಪೆನ್ ಕಮಿಟಿ ಆನ್ ಸೆಂಟ್ರಲ್ ಲೇಷಿಸ್‌ಲೇಷನ್ ಫಾರ್ ಕನ್ಸ್‌ಟ್ರಕ್ಷನ್ ಲೇಬರ್ ನೇತೃತ್ವದಲ್ಲಿ ದಿಲ್ಲಿಯ ಸಂಸತ್ ಮುಂಭಾಗ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.