ಸಿದ್ಧಗಂಗಾ ಶ್ರೀಗಳಿಗೆ ಬಿಬಿಎಂಪಿ ಸಭೆಯಲ್ಲಿ ನಮನ

Update: 2019-01-29 12:42 GMT

ಬೆಂಗಳೂರು, ಜ.29: ಇತ್ತೀಚಿಗೆ ನಿಧನರಾದ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ್ ಸ್ವಾಮೀಜಿಗೆ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ಶಿವರಾಮು ಸಂತಾಪ ಸೂಚಕ ನಿರ್ಣಯ ಮಂಡಿಸಿದ ಬಳಿಕ ಸಭೆಯಲ್ಲಿದ್ದ ಎಲ್ಲ ಪಾಲಿಕೆ ಸದಸ್ಯರು ಒಂದು ನಿಮಿಷದ ಮೌನಾಚರಣೆ ಮೂಲಕ ಸ್ವಾಮೀಜಿಗೆ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀಗಳು ಹಸಿದವರಿಗೆ ದೇವರಾಗಿದ್ದರು. ಅವರು ಇದ್ದಾಗಲೇ ಭಾರತ ರತ್ನ ಸಿಗಬೇಕಾಗಿತ್ತು. ಆದರೆ, ಈಗಲೂ ಕಾಲ ಮಿಂಚಿಲ್ಲ. ಕೇಂದ್ರ ಸರಕಾರ ಅವರಿಗೆ ಭಾರತರತ್ನ ನೀಡಬೇಕು ಎಂದು ಹೇಳಿದರು.

ಈಗಾಗಲೇ ಅವರ ಹೆಸರಿನಲ್ಲಿ ಜಯಂತ್ಯುತ್ಸವ ಕಾರ್ಯಕ್ರಮಕ್ಕಾಗಿ ಬಿಬಿಎಂಪಿ 1 ಕೋಟಿ ರೂ. ಅನುದಾನವನ್ನು ತೆಗೆದಿರಿಸಿದೆ. ಗೊರಗುಂಟೆ ಪಾಳ್ಯದಿಂದ ತುಮಕೂರು ರಸ್ತೆಗೆ ಹಾಗೂ ಮೇಲು ಸೇತುವೆಗೆ ಅವರ ಹೆಸರನ್ನು ನಾಮಕರಣ ಮಾಡಿದೆ ಎಂದು ತಿಳಿಸಿದರು.

ಮುಂದಿನ ಬಿಬಿಎಂಪಿ ಬಜೆಟ್‌ನಲ್ಲಿ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮೀಜಿ ಹೆಸರಿನಲ್ಲಿ ಯಾವುದಾದರೂ ಯೋಜನೆ ಜಾರಿಗೆ ತರಬೇಕು ಎಂದು ಚಿಂತನೆ ನಡೆಸಲಾಗುತ್ತಿದೆ. ಆ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ವಿರೋಧ ಪಕ್ಷದ ಪದ್ಮನಾಭರೆಡ್ಡಿ ಮಾತನಾಡಿ, ಬಿಬಿಎಂಪಿ 10 ಸಾವಿರ ಕೋಟಿ ಬಜೆಟ್ ಮಂಡಿಸಿ, ತನ್ನ ವ್ಯಾಪ್ತಿಯ 12,000 ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲು ಹೆಣಗಾಡುತ್ತಿದೆ. ಆದರೆ, ಶ್ರೀಗಳು 10,000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಸತಿ, ಅನ್ನ ನೀಡುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ಮಾಡಿದ್ದಾರೆ. ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡಿದ ಏಕೈಕ ಸ್ವಾಮೀಜಿ ಆಗಿದ್ದಾರೆ ಎಂದರು.

ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ ಮಾತನಾಡಿ, ಸಿದ್ಧಗಂಗಾ ಶ್ರೀಗಳಿಂದು ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಅವರ ತತ್ವ ಆದರ್ಶಗಳು ಮಾತ್ರ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ. ಅವರಿಗೆ ಭಾರತ ರತ್ನ ಸಿಗಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್‌ನ ಮಂಜುನಾಥ್ ರೆಡ್ಡಿ, ಸತ್ಯನಾರಾಯಣ, ಜಿ.ಪದ್ಮಾವತಿ ಹಾಗೂ ಬಿಜೆಪಿಯ ಉಮೇಶ್ ಶೆಟ್ಟಿ ಸೇರಿದಂತೆ ಹಲವು ಸದಸ್ಯರು ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಇಂದು ನಿಧನರಾದ ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡೀಸ್‌ಗೆ ಪಾಲಿಕೆ ಸದಸ್ಯರು ಸಂತಾಪ ಸೂಚಿಸಿದರು.

ಹಲವಾರು ಶಿಕ್ಷಣ ಸಂಸ್ಥೆಗಳ ಮೂಲಕ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಸಂಸ್ಕೃತ ಶಾಲೆಗಳನ್ನು ತೆರೆದಿದ್ದಾರೆ. ಮಠದ ಆವರಣದಲ್ಲಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಅವರ ಸರಳ ಜೀವನ ಎಲ್ಲರಿಗೂ ಮಾದರಿಯಾಗಿದೆ. ಶ್ರೀಗಳು ಆಧುನಿಕ ಬಸವಣ್ಣರಾಗಿದ್ದು, ಸಾಮಾನ್ಯರಿಗೂ ಶಿಕ್ಷಣ ನೀಡುವ ಮೂಲಕ ಗತ್ತಿನಿಂದ ತಲೆ ಎತ್ತಿನಿಲ್ಲುವಂತೆ ಮಾಡಿದವರಾಗಿದ್ದಾರೆ.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News