ಭೀಕರ ಬರ ಪರಿಸ್ಥಿತಿ: 2430 ಕೋಟಿ ರೂ.ನೆರವಿಗೆ ಕೇಂದ್ರ ಸರಕಾರಕ್ಕೆ ಮನವಿ- ಸಚಿವ ದೇಶಪಾಂಡೆ

Update: 2019-01-29 14:04 GMT

ಬೆಳಗಾವಿ, ಜ.29: ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ಎದುರಾಗಿದ್ದು ಕೇಂದ್ರ ಸರಕಾರದಿಂದ 2,430 ಕೋಟಿ ರೂ. ಬರ ಪರಿಹಾರಕ್ಕಾಗಿ ಕೇಳಿದ್ದೇವೆ ಎಂದು ಕಂದಾಯ ಸಚಿವ ಹಾಗೂ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಮಂಗಳವಾರ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ಕೆಲವು ಬರಪೀಡಿತ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ನಗರದ ಹೊರವಲಯದ ಪಂತಬಾಳೇಕುಂದ್ರಿ ಗ್ರಾಮದಲ್ಲಿ ರೈತರು ಬರ ಪರಿಹಾರ ಯೋಜನೆಯಲ್ಲಿ ಹಸಿರು ಮೇವು ಉತ್ಪಾದನೆ ಮಾಡಿರುವುದನ್ನು ಪರಿಶೀಲಿಸಿದ ಅವರು, ಹಿಂಗಾರು ಹಂಗಾಮಿನಲ್ಲಿ ರಾಜ್ಯದ 156 ತಾಲೂಕುಗಳು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದರು.

ಬರ ನಿರ್ವಹಣೆಗೆ ಪ್ರತಿಯೊಂದು ತಾಲೂಕಿಗೆ 25 ಲಕ್ಷ ರೂ.ನೀಡಲಾಗಿದೆ. ಜೊತೆಗೆ ಬರ ಪೀಡಿತವಲ್ಲದ ತಾಲೂಕುಗಳಿಗೂ 25 ಲಕ್ಷ ರೂ.ನೀಡಲಾಗಿದೆ. ಕುಡಿಯುವ ನೀರಿನ ಕೊರತೆಯಾಗದಂತೆ ಮನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ ಅನುದಾನ ಲಭ್ಯ ಇದೆ. ಬರ ಇರುವಲ್ಲಿ ಟಾಸ್ಕಫೋರ್ಸ್ ಸಮಿತಿಗೆ 25 ಲಕ್ಷ ರೂ.ಅನುದಾನ ನೀಡಲಾಗಿದೆ. ಮೇವಿನ ಕೊರತೆ ನೀಗಿಸಲು ಎಸ್.ಡಿ.ಆರ್.ಎಫ್ ತಂಡದಿಂದ 25 ಕೋಟಿ ರೂ. ಅನುದಾನವನ್ನು ಕೃಷಿ ಇಲಾಖೆಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಅಲ್ಲದೇ, ಜಿಲ್ಲೆಯಲ್ಲಿ 78,632 ಹಸಿರು ಮೇವಿನ ಕಿಟ್ ವಿತರಿಸಲಾಗಿದೆ ಹಾಗೂ ದನಕರುಗಳಿಗೆ ಕುಡಿಯುವ ನೀರನ್ನು ಒದಗಿಸಲು ಕೃಷಿ ಭೂಮಿಯಲ್ಲಿ ಅಲ್ಲಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುವುದು ಮತ್ತು ಬರಗಾಲದಲ್ಲಿ ಉದ್ಯೋಗ ಸಮಸ್ಯೆಯಾಗದಂತೆ ನರೇಗಾ ಕೂಲಿ ದಿನಗಳನ್ನು 100 ರಿಂದ 150 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು.

ಹಿಂಗಾರು ಬೆಳೆ ಹಾನಿಯಾಗಿರುವ ಪ್ರದೇಶಗಳ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಸಂಪೂರ್ಣ ಸಮೀಕ್ಷೆ ವರದಿ ಜಿಲ್ಲಾಧಿಕರಿಗಳು ಸಲ್ಲಿಸಿದ ಮೊದಲ ವಾರದೊಳಗೆ ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಹಿಂಗಾರು ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರವನ್ನು ಸೂಚಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ಸುರೇಶ್ ಅಂಗಡಿ, ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಕೆ..ರಾಜೇಂದ್ರ, ಉಪ ವಿಭಾಗಧಿಕಾರಿ ಕವಿತಾ ಯೋಗಪ್ಪನವರ, ತಹಶೀಲ್ದಾರ್ ಮಂಜುಳಾ ನಾಯಕ, ಕೃಷಿ ಇಲಾಖೆ ಜಂಟಿ ನಿರ್ದೆಶಕ ಜಿಲಾನಿ ಮೊಕಾಶಿ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News