ಕುದ್ಮುಲ್ ರಂಗರಾಯರ ನೆನಪಿನಲ್ಲಿ...

Update: 2019-01-29 18:51 GMT

ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ  ಎಂಬ ಕುದ್ಮುಲ್ ರಂಗರಾಯರ ಹೇಳಿಕೆಯನ್ನು ಮಂಗಳೂರಿನ ನಂದಿಗುಡ್ಡೆಯಲ್ಲಿರುವ ಅವರ ಸಮಾಧಿಯ ಮೇಲೆ ಕೆತ್ತಲಾಗಿದೆ. ಸುಮಾರು ನೂರ ಮೂವತ್ತು ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಂಗರಾಯರು ದಲಿತರ ಏಳಿಗೆಗಾಗಿ ನಲವತ್ತು ವರ್ಷಗಳ ಕಾಲ (1888-1928) ಅವಿರತವಾಗಿ ದುಡಿದರು.

ಇಂದು (ಜನವರಿ 30ರಂದು) ಕುದ್ಮುಲ್ ರಂಗರಾಯರ 92ನೇ ಪುಣ್ಯತಿಥಿ. ಜೂನ್ 29, 1859ರಲ್ಲಿ ಹುಟ್ಟಿದ ಅವರು 69 ವರ್ಷಗಳ ಕಾಲ ಬದುಕಿದ್ದರು. ಮರಣ 30.01.1928. ಅವರ ಬದುಕು ದಲಿತೋದ್ಧಾರಕ್ಕೆ ಅರ್ಪಿತವಾಗಿತ್ತು. ಈಗಿನ ಕಾಸರಗೋಡು ಜಿಲ್ಲೆಯ ಕುದ್ಮುಲ್ ಎಂಬ ಹಳ್ಳಿ ರಂಗರಾಯರ ಹುಟ್ಟೂರು. ತಂದೆ ಜಮೀನುದಾರ ದೇವಪ್ಪಯ್ಯ ಮತ್ತು ತಾಯಿ ಗೌರಿ. ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಲದವರವರು. ಮಂಗಳೂರಿನಲ್ಲಿ ಕೆಲಕಾಲ ಶಿಕ್ಷಕ ವೃತ್ತಿ ನಡೆಸಿದ ರಂಗರಾಯರು ಪ್ಲೀಡರ್ ಪರೀಕ್ಷೆಯನ್ನು ಪಾಸು ಮಾಡಿದರು. ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಯಾದರು. ಬಡವರ ವಕೀಲರಾದರು. ಅವರು ದಲಿತೋದ್ಧಾರಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಎರಡು ಪ್ರಮುಖ ಘಟನೆಗಳು ಕಾರಣವಾದವು. ಒಂದನೆಯದಾಗಿ, ಅತ್ಯಾಚಾರಕ್ಕೊಳಗಾದ ಕೆಳಜಾತಿ ಹೆಣ್ಣೊಬ್ಬಳ ಪರ ವಕೀಲಿ ಮಾಡಿದಾಗ ಇತರರು ಸಹಿಸದಾದರು. ತಮ್ಮ ಕುಲದವರಿಂದಲೇ ರಂಗರಾಯರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರು. ಎರಡನೆಯದಾಗಿ, ಬ್ರಿಟಿಷ್ ನ್ಯಾಯಾಧೀಶರು 1887-1888ರಲ್ಲಿ ದಲಿತರಾದ ಬೆಂದೂರು ಬಾಬುರವರಿಗೆ ಮಂಗಳೂರು ನ್ಯಾಯಾಲಯದಲ್ಲಿ ಗುಮಾಸ್ತನ ಹುದ್ದೆ ಕೊಟ್ಟಾಗಲೂ ಇತರರು ಸಹಿಸಲಿಲ್ಲ. ಮೂಲಭೂತವಾದಿ ಸವರ್ಣೀಯರು ನ್ಯಾಯಾಧೀಶರನ್ನೇ ವರ್ಗಾವಣೆ ಮಾಡಿಸಿಬಿಟ್ಟರು. ಆಗ ಬ್ರಿಟಿಷ್ ನ್ಯಾಯಾಧೀಶರ ಕೋರಿಕೆಯಂತೆ ರಂಗರಾಯರು ವಕೀಲಿ ವೃತ್ತಿ ತ್ಯಜಿಸಿ ದಲಿತರ ಏಳಿಗೆಯಲ್ಲಿ ತೊಡಗಿಸಿಕೊಂಡರು. ರಂಗರಾಯರು ದಲಿತೋದ್ಧ್ದಾರಕ್ಕಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಕಂಕನಾಡಿ, ಉಡುಪಿ, ಮೂಲ್ಕಿ, ಉಳ್ಳಾಲ, ಬನ್ನಂಜೆ, ಬೋಳೂರು, ಬಾಬುಗುಡ್ಡೆ, ನೇಜಾರು, ದಡ್ಡಲ್ ಕಾಡು, ಅತ್ತಾವರ ಮತ್ತಿತರ ಕಡೆ ದಲಿತರ ಶಿಕ್ಷಣಕ್ಕಾಗಿ ಪಂಚಮ ಶಾಲೆಗಳು, ಅಲ್ಲಿ ಮಧ್ಯಾಹ್ನದ ಊಟ, ಜೊತೆಗೆ ವಿದ್ಯಾರ್ಥಿಗಳಿಗೆ ದಿನಕ್ಕೆ ಎರಡರಿಂದ ನಾಲ್ಕು ಪೈಸೆಗಳ ಉತ್ತೇಜನ ಹಣ, ಸರಕಾರಿ ಕಾಲೇಜಿನ ಪ್ರವೇಶಕ್ಕೆ ಅಗತ್ಯಕ್ರಮ, ಬಟ್ಟೆ ಹೊಲಿಯುವಿಕೆ, ಬಡಗಿ, ತೋಟಗಾರಿಕೆ, ರೇಷ್ಮೆ ಕೃಷಿ ಕುರಿತು ತರಬೇತಿ, ಕೊರಗ ಜನಾಂಗದವರಿಗೆ ಸರಕಾರಿ ಭೂಮಿ ಹಂಚಿಕೆ, ಉಚಿತ ವಸತಿ ನಿವೇಶನ, ಅಸ್ಪೃಶ್ಯರಿಗೆ ಕುಡಿಯುವ ನೀರಿನ ಬಾವಿ, ಉಡುಪಿ, ಬನ್ನಂಜೆ, ಉದ್ಯಾವರ, ಪಣಂಬೂರು, ತಣ್ಣೀರುಬಾವಿ, ಬೈಕಂಪಾಡಿಗಳಲ್ಲಿ ಭೂದಾನದ ಭೂಮಿಹಂಚಿಕೆ, ಕರಕುಶಲ ಕಲೆಯ ವಸ್ತುಗಳ ತಯಾರಿಕೆಗೆ ಕೊರಗರಿಗೆ ಆರ್ಥಿಕ ಸೌಲಭ್ಯ, ದಕ್ಷಿಣ ಕನ್ನಡ ಜಿಲ್ಲೆಯ ದಲಿತರ ಜೀತವಿಮೋಚನೆ, ಮಂಗಳೂರು ಪುರಸಭೆಯಲ್ಲಿ ಕೊರಗರಿಗೆ ನೌಕರಿ, ಮಂಗಳೂರಿನ ಕಾಪಿಕಾಡ್‌ನಲ್ಲಿ ದಲಿತರಿಗಾಗಿ ಸಮುದಾಯ ಭವನದ ನಿರ್ಮಾಣ, ಜಿಲ್ಲಾ ಮಂಡಳಿ ಮತ್ತು ಮಂಗಳೂರು ಪುರಸಭೆಯಲ್ಲಿ ದಲಿತರಿಗೆ ರಾಜಕೀಯ ಮೀಸಲಾತಿ, ಶೇಡಿಗುಡ್ಡೆಯಲ್ಲಿ ಆದಿದ್ರಾವಿಡ ಸಹಕಾರ ಸಂಘದ ಸ್ಥಾಪನೆ, ಅಂತರ್‌ಜಾತಿ ವಿವಾಹ ಹಾಗೂ ವಿಧವಾ ವಿವಾಹಕ್ಕೆ ಪ್ರೋತ್ಸಾಹ, ವಿಧವೆಯರಿಗಾಗಿ ಆಶ್ರಮಗಳ ಸ್ಥಾಪನೆ, ಉಳ್ಳಾಲದ ರಘುನಾಥಯ್ಯನವರೊಂದಿಗೆ ಸೇರಿ 1897ರಲ್ಲಿ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ (ಡಿಸಿಎಂ) ಸ್ಥಾಪನೆ, ಅದರ ಘೋಷವಾಕ್ಯ ‘‘ದೀನೋದ್ಧಾರಣಮ್, ದೇಶೋದ್ಧ್ದಾರಣಮ್’’ ದೀನರ ಉದ್ಧಾರವಾದರೆ-ದೇಶದ ಉದ್ಧಾರವಾಗುತ್ತದೆ .... ಹೀಗೆ ದಲಿತರ ಉದ್ಧಾರಕ್ಕೆ ಹತ್ತು ಹಲವು ಕಾರ್ಯಕ್ರಮಗಳ ಆಯೋಜನೆ. ಅಸ್ಪೃಶ್ಯತೆಯ ನಿರ್ಮೂಲನೆಯಲ್ಲಿ ರಂಗರಾಯರು ಮಹಾತ್ಮಾ ಗಾಂಧಿಯವರಿಗೆ ಪ್ರೇರಕಶಕ್ತಿಯಾದರು. ಬ್ರಿಟಿಷ್ ಸರಕಾರವು ರಂಗರಾಯರಿಗೆ ‘ರಾವ್ ಸಾಹೇಬ್’ ಎಂಬ ಬಿರುದು ಕೊಟ್ಟಿತು. ಪತ್ನಿ ರುಕ್ಮಿಣಿ ಅಮ್ಮನವರು ರಂಗರಾಯರ ದಲಿತೋದ್ಧಾರದ ಕೆಲಸಗಳಿಗೆ ಕೈಜೋಡಿಸಿದರು. ಇಂತಹ ದಲಿತೋದ್ಧಾರಕ ಕುದ್ಮುಲ್ ರಂಗರಾಯರ ಕುಡಿಗಳು ಯಾರು? ಆ ಕುಡಿಗಳು ಎಲ್ಲೆಲ್ಲಿ ಹಬ್ಬಿಕೊಂಡವು. ರಂಗರಾಯರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳ ಕುರಿತು ವಿವರಗಳನ್ನು ಅಂತರ್ಜಾಲ ಹಾಗೂ ಇತರ ಮೂಲಗಳಲ್ಲಿ ಹೆಕ್ಕುತ್ತಾ ಹೋದ ನನಗೆ ಸಿಕ್ಕ ಮಾಹಿತಿ ರೋಚಕವಾಗಿತ್ತು. ರಂಗರಾಯರಿಗೆ ಮೂರು ಗಂಡು ಮಕ್ಕಳು. ಹಿರಿಯ ಮಗನಾದ ದೇವರಾಜ್ ಅವರು ಟಾಟಾ ವಿಮಾನ ಕಂಪೆನಿ ಮತ್ತು ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. ಕೆಲಕಾಲ ಮುಂಬೈಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಎರಡನೆಯ ಮಗ ಸಂಜೀವರಾವ್ ಅವರು ರಂಗರಾಯರು ಬದುಕಿದ್ದಾಗಲೇ 1918ರಲ್ಲಿ ತೀರಿಕೊಂಡರು. ರಂಗರಾಯರ ಮರಣವಾದ ಎರಡು ವರ್ಷಗಳಲ್ಲಿ ಕಿರಿಮಗ ಅಮೃತರಾವ್ 1930ರಲ್ಲಿ ಮರಣಹೊಂದಿದರು.

ರಂಗರಾಯರಿಗೆ ಮೂರು ಹೆಣ್ಣು ಮಕ್ಕಳು. ಗಂಡುಮಕ್ಕಳಿಗಿಂತ ದೊಡ್ಡವರಾದ ರಾಧಾಬಾಯಿ (1891-1960)ಯವರು 1912 ರಲ್ಲಿ ವಿಧವೆಯಾದರು. ನಂತರ ಅವರ ವಿವಾಹವು ಸೇಲಂ ಜಿಲ್ಲೆಯ ಕುಮಾರಮಂಗಲಂನ ಜಮೀನುದಾರರಾದ ಪಿ. ಸುಬ್ಬರಾಯನ್ ಅವರೊಂದಿಗೆ ಜರುಗಿತು. ರಾಧಾಬಾಯಿಯವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸುಬ್ಬರಾಯನ್ ಅವರೊಂದಿಗೆ ಪ್ರೀತಿ ಅಂಕುರಿಸಿತು. ಅವರ ಮದುವೆಯನ್ನು ಸಿ. ರಾಜಗೋಪಾಲಾಚಾರಿಯವರು ನಡೆಸಿಕೊಟ್ಟರು. ರಾಧಾಬಾಯಿಯವರು 1930 ಮತ್ತು 1932ರಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನ ಸಭೆಗಳಲ್ಲಿ ಮಹಿಳಾ ಹಕ್ಕುಗಳ ಪ್ರತಿನಿಧಿಯಾಗಿ ಭಾಗವಹಿಸಿದರು. 1938ರಲ್ಲಿ ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾದರು. ರಂಗರಾಯರ ಅಳಿಯನಾದ ಪಿ. ಸುಬ್ಬರಾಯನ್ ಅವರು 1926ರಿಂದ 1930ರವರೆಗೆ ಮದ್ರಾಸ್ ಪ್ರಾಂತದ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರ ಸರಕಾರದಲ್ಲಿ ಜವಾಹರಲಾಲ್ ನೆಹರೂ ಅವರ ಮಂತ್ರಿಮಂಡಲದಲ್ಲಿ 1959ರಿಂದ 1962ರವರೆಗೆ ಸಾರಿಗೆ ಮತ್ತು ಸಂಪರ್ಕ ಖಾತೆಯ ಸಚಿವರಾಗಿದ್ದರು. ಮರಣ ಹೊಂದುವುದಕ್ಕೂ ಮೊದಲು ಐದಾರು ತಿಂಗಳುಗಳ ಕಾಲ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ರಾಧಾಬಾಯಿಯವರ ಅಕ್ಕ ಲಲಿತಾಬಾಯಿಯವರು ಸುಬ್ಬರಾವ್ ಎಂಬವರೊಂದಿಗೆ ವಿವಾಹವಾಗಿ ಮಂಗಳೂರಿನ ಕದ್ರಿಯ ಶಿವಬಾಗ್‌ನಲ್ಲಿ ವಾಸವಿದ್ದರು. ರಂಗರಾಯರ ಮೂರನೆಯ ಮಗಳ ಹೆಸರು ಶಾಂತಿ. 1927ರಲ್ಲಿ ಆರ್ಯಸಮಾಜ ಸೇರಿದ ರಂಗರಾಯರು ಸನ್ಯಾಸತ್ವ ಸ್ವೀಕರಿಸಿ ಸ್ವಾಮಿ ಈಶ್ವರಾನಂದ ಎಂಬ ಹೆಸರಿನವರಾದರು. ತಮ್ಮ ಅಂತಿಮ ದಿನಗಳನ್ನು ಹಿರಿಯ ಮಗಳಾದ ಲಲಿತಾಬಾಯಿಯವರ ಮನೆಯಲ್ಲಿ ಕಳೆದರು. ರಂಗರಾಯರು ಬರೆದಿಟ್ಟಿದ್ದ ಉಯಿಲಿನಂತೆ ಅಸ್ಪೃಶ್ಯರಾದ ತೋಟಿ ಜನಾಂಗದವರು ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು. ರಂಗರಾಯರ ಎರಡನೆಯ ಮಗಳಾದ ರಾಧಾಬಾಯಿ ಸುಬ್ಬರಾಯನ್ ದಂಪತಿಗೆ ಮೋಹನ ಕುಮಾರಮಂಗಲಂ, ಪರಮಶಿವ ಪ್ರಭಾಕರ ಕುಮಾರಮಂಗಲಂ (ಪಿ. ಪಿ. ಕುಮಾರಮಂಗಲಂ) ಮತ್ತು ಗೋಪಾಲ ಕುಮಾರಮಂಗಲಂ ಎಂಬ ಮೂವರು ಗಂಡು ಮಕ್ಕಳು ಮತ್ತು ಪಾರ್ವತಿ ಕೃಷ್ಣನ್ ಎಂಬ ಒಬ್ಬ ಹೆಣ್ಣು ಮಗಳು.

ರಂಗರಾಯರ ಮಗಳ ಮಗನಾದ ಮೋಹನ ಕುಮಾರಮಂಗಲಂ ಅವರು ಭಾರತ ಸರಕಾರದ ಮಾಜಿ ಮಂತ್ರಿಗಳು (1971 ರಿಂದ 1973). ಮತ್ತೊಬ್ಬ ಮೊಮ್ಮಗ ಪ್ರಭಾಕರ ಕುಮಾರಮಂಗಲಂ ಎರಡನೆಯ ಮಹಾಯುದ್ಧದಲ್ಲಿ ಪಾಲ್ಗೊಂಡ ನಂತರ 1967ರಿಂದ 1970ರವರೆಗೆ ಜನರಲ್ ಹುದ್ದೆಯಲ್ಲಿ ಭಾರತೀಯ ಸೇನೆಯಲ್ಲಿದ್ದರು. ಗೋಪಾಲ ಕುಮಾರಮಂಗಲಂ ಎಂಬ ರಂಗರಾಯರ ಮೊಮ್ಮಗ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರಾಗಿದ್ದರು ಎಂಬ ಮಾಹಿತಿಯಿದೆ. ರಂಗರಾಯರ ಮೊಮ್ಮಗಳಾದ ಪಾರ್ವತಿ ಕೃಷ್ಣನ್ (ಜನನ : 1919; ಮರಣ : 2014) ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದಲ್ಲಿದ್ದರು. 1954 ರಿಂದ 1957ರವರೆಗೆ ರಾಜ್ಯ ಸಭೆಯ ಸದಸ್ಯರಾಗಿದ್ದರು. ಕೊಯಮತ್ತೂರು ಕ್ಷೇತ್ರದಿಂದ 1957, 1974 ಮತ್ತು 1977ರಲ್ಲಿ, ಒಟ್ಟು ಮೂರು ಸಾರಿ ಲೋಕಸಭೆಗೆ ಕಮ್ಯುನಿಸ್ಟ್ ಪಕ್ಷದಿಂದ ಆಯ್ಕೆಯಾದರು. ರಾಧಾಬಾಯಿ ದಂಪತಿಯ ಮೊಮ್ಮಗನಾದ ಹಾಗೂ ಮೋಹನ ಕುಮಾರಮಂಗಲಂ ಅವರ ಮಗನಾದ ರಂಗರಾಜನ್ ಕುಮಾರಮಂಗಲಂ ಅವರು ಪಿ.ವಿ.ನರಸಿಂಹರಾವ್‌ರವರ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗಿ (1991-1993) ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಮಂತ್ರಿಮಂಡಲದಲ್ಲಿ ಇಂಧನ ಸಚಿವರಾಗಿ (1998-2000) ಸೇವೆ ಸಲ್ಲಿಸಿದರು.

ಇವಿಷ್ಟು ಕುದ್ಮುಲ್ ರಂಗರಾಯರ ಪ್ರಮುಖ ಕುಡಿಗಳಷ್ಟೇ. ಇನ್ನೂ ಹರಡಿಕೊಂಡಿರುವ ಕುಡಿಗಳಿರಬಹುದು. ಅಂತಹ ಹುಡುಕಾಟವೂ ನಡೆಯಬೇಕಿದೆ. ರಂಗರಾಯರ ದಲಿತೋದ್ಧಾರದ ಕೆಲಸಗಳ ಕುರಿತು ಡಾಕ್ಟರೇಟ್ ಪ್ರಬಂಧವೂ ಸಲ್ಲಿಕೆಯಾಗಿದೆ. ಅವರೊಬ್ಬ ಮೇರುವ್ಯಕ್ತಿ. ನಿತ್ಯ ಸ್ಮರಣೆಗೆ ಅರ್ಹ ದಾರ್ಶನಿಕರು. ಕುದ್ಮುಲ್ ರಂಗರಾಯರ ಸಮಾಧಿಗೆ ಒಂದು ಪುಟ್ಟ ಸ್ಮಾರಕವನ್ನು 1998ರ ಸುಮಾರಿಗೆ ಮಂಗಳೂರಿನ ದಲಿತ ಸಂಘಟನೆಗಳವರು ನಿರ್ಮಿಸಿದ್ದಾರೆ. ಅದರಲ್ಲಿ ಮುಗಳವಳ್ಳಿ ಕೇಶವ ಧರಣಿಯವರದು ಪ್ರಮುಖ ಪಾತ್ರ. ನವ ಮಂಗಳೂರು ಬಂದರು ಮಂಡಳಿಯ ಸಿವಿಲ್ ಇಂಜಿನಿಯರ್ ರಾಜಪ್ಪಮತ್ತು ಫ್ಯಾಕ್ಟ್ ಲಿಮಿಟೆಡ್‌ನ ಅಧಿಕಾರಿ ಬಾಲು ವರದರಾಜು ಅವರು ಸ್ಮಾರಕದ ವಿನ್ಯಾಸವನ್ನು ಮಾಡಿಕೊಟ್ಟರಂತೆ. 2014ರ ರಾಜ್ಯ ಮುಂಗಡ ಪತ್ರದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕುದ್ಮುಲ್ ರಂಗರಾಯರ ಸಮಾಧಿಯನ್ನು ಸ್ಮಾರಕವಾಗಿ ರೂಪಿಸಲು ಒಂದು ಕೋಟಿ ರೂಪಾಯಿಗಳ ಅನುದಾನವನ್ನು ಗೊತ್ತುಪಡಿಸಿದರು. ಇಲ್ಲಿಯವರೆಗೆ ಅಂತಹ ಸ್ಮಾರಕ ನಿರ್ಮಾಣದ ಕೆಲಸ ಆರಂಭವಾಗದಿರುವುದು ಆಶ್ಚರ್ಯಕರ. ಇನ್ನಾದರೂ ಕುದ್ಮುಲ್ ರಂಗರಾಯರ ಸಮಾಧಿಯು ಸ್ಮಾರಕವಾಗಿ ರೂಪುಗೊಳ್ಳಬೇಕು. ಅವರ ಹೆಸರನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಕಾರ್ಯವಾಗಬೇಕು.

Writer - ಪ್ರೊ. ಎಂ. ನಾರಾಯಣ ಸ್ವಾಮಿ

contributor

Editor - ಪ್ರೊ. ಎಂ. ನಾರಾಯಣ ಸ್ವಾಮಿ

contributor

Similar News