ನರೇಂದ್ರ ಮೋದಿಯವರ ‘ನಮೋ ಆ್ಯಪ್’ ಸುಳ್ಳುಸುದ್ದಿಗಳನ್ನು ಹರಡುತ್ತಿದೆಯೇ?

Update: 2019-01-30 17:15 GMT

ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಸುಳ್ಳುಸುದ್ದಿಗಳ ಹಾವಳಿ ಹಲವಾರು ಗುಂಪು ಹತ್ಯೆಗಳಿಗೆ ಕಾರಣವಾಗಿದೆ. ಜತೆಗೆ ದೇಶದ ರಾಜಕೀಯವನ್ನು ಹೊಲಸುಗೊಳಿಸಿದ್ದು, ಜನಪ್ರಿಯ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಜಿಂಗ್ ಅಪ್ಲಿಕೇಶನ್‍ಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಆತಂಕಕಾರಿ ಸಂಗತಿಯೆಂದರೆ ಇಂತಹ ಪ್ರಮುಖ ಸುಳ್ಳು ಸುದ್ದಿಗಳ ಸಂಗ್ರಹ ಹಾಗೂ ಪ್ರಸಾರದ ಪ್ರಮುಖ ಕೇಂದ್ರ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದೆ ಎಂಬ ವರದಿಯನ್ನು ಪತ್ರಕರ್ತ ಸಮರ್ಥ್ ಬನ್ಸಾಲ್  ಪ್ರಕಟಿಸಿದ್ದಾರೆ.

ನಮೋ ಆ್ಯಪನ್ನು 10 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‍ ಲೋಡ್ ಮಾಡಿಕೊಳ್ಳಲಾಗಿದೆ. ಬಹುತೇಕ ಪಕ್ಷದ ಕಾರ್ಯಕರ್ತರು ಹಾಗೂ ಪ್ರಧಾನಿ, ಬಿಜೆಪಿಯ ಬೆಂಬಲಿಗರು ಈ ಆ್ಯಪ್, ಡೌನ್‍ ಲೋಡ್ ಮಾಡಿಕೊಂಡಿದ್ದು, ಇದು ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತಿದೆ. ಇದರಲ್ಲಿ ಪೂರ್ವಾನುಮತಿ ಇಲ್ಲದೇ ಬಳಕೆದಾರರ ಮಾಹಿತಿಯನ್ನು ಮೂರನೇ ವ್ಯಕ್ತಿ ಜತೆ ಹಂಚಿಕೊಳ್ಳುವುದು, ಬಳಕೆದಾರರ ಫೋನ್ ‍ಗಳ ಮೇಲೆ ದಾಳಿ ಅನುಮತಿಗಾಗಿ ಸ್ವೀಪಿಂಗ್ ಆಕ್ಸೆಸ್‍ ಗೆ ಮನವಿ ಮಾಡಿಕೊಳ್ಳುವುದು ಸೇರಿದೆ.

ಬಿಜೆಪಿಯನ್ನೇ ಸುಳ್ಳುಸುದ್ದಿಗಳ ದೊಡ್ಡ ಮೂಲ ಎಂದು ಪರಿಗಣಿಸಲಾಗುತ್ತದೆ. ಕಳೆದ ವರ್ಷ ಬಿಬಿಸಿ ನಡೆಸಿದ ಅಧ್ಯಯನವೊಂದರಿಂದ ತಿಳಿದುಬರುವಂತೆ, ಬಿಜೆಪಿ ಪರ ಸಾಮಾಜಿಕ ಜಾಲತಾಣ ಖಾತೆಗಳು ಸುಳ್ಳುಸುದ್ದಿಗಳನ್ನು ಹರಡುವ ಸಾಧ್ಯತೆ, ಬಿಜೆಪಿ ವಿರೋಧಿಗಳ ಖಾತೆಗಳು ಸುಳ್ಳುಸುದ್ದಿ ಹರಡುವುದಕ್ಕಿಂತ ಅಧಿಕ ಎಂದು ತಿಳಿದುಬಂದಿದೆ. ಬಿಜೆಪಿ ಹೇಗೆ ತಪ್ಪು ಮಾಹಿತಿಗಳನ್ನು, ಧಾರ್ಮಿಕ ಪ್ರಚೋದನೆಯನ್ನು ಮತ್ತು ಜಾತಿ ಆಧರಿತ ವ್ಯಕ್ತಿ ಮಾಹಿತಿಗಳನ್ನು ವಾಟ್ಸಪ್‍ ನಲ್ಲಿ ಹೇಗೆ ಬಳಸಿಕೊಳ್ಳುತ್ತಿದೆ ಎಂಬ ಬಗ್ಗೆ "ಟೈಮ್" ಕಳೆದ ವಾರ ವರದಿ ಮಾಡಿತ್ತು.

ಬಹುಶಃ ಮುಂದಿನ ಮೇ ತಿಂಗಳಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ, ಈ ತಪ್ಪು ಮಾಹಿತಿಯ ವಿವಾದಕ್ಕೆ ಹೆಚ್ಚಿನ ಮಹತ್ವವಿದೆ.

ಖಾಸಗಿ ಟ್ವಿಟರ್ ಹಾಗೂ ಫೇಸ್‍ ಬುಕ್ ಪೇಜ್‍ ಗಳು

ನಮೋ ಆ್ಯಪ್, ಬಳಕೆದಾರರು ಮೋದಿ ಮರ್ಚಂಡೈಸ್ ಖರೀದಿಸುವಂತೆ ಮಾಡಿ ರಾಜಕೀಯ ವಿಷಯಗಳ ಬಗ್ಗೆ ಸಮೀಕ್ಷೆಗಳನ್ನು ಕೈಗೊಳ್ಳುತ್ತದೆ. "ಮೈ ನೆಟ್‍ವರ್ಕ್" ಎಂಬ ಬಿಜೆಪಿಯ ಇತ್ತೀಚಿನ ಮೆಸೇಜಿಂಗ್ ಆ್ಯಪ್ (ಖಾಸಗಿ ಟ್ವಿಟ್ಟರ್ ಮಾದರಿಯದ್ದು), ಯಾವುದೇ ಬಳಕೆದಾರ ಯಾವುದೇ ಮಾಹಿತಿಯನ್ನು ಪೋಸ್ಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಮೈ ನೆಟ್ ವರ್ಕ್ ‍ನಲ್ಲಿ ಗೇಮ್ ಮಾದರಿಯ ಹಂಚಿಕೆಯ ಚೌಕಟ್ಟು ಇದ್ದು, ಇಂಥ ಪೋಸ್ಟ್ ಗಳನ್ನು ಹಾಕಿ ಬಳಕೆದಾರರು ಚಟುವಟಿಕೆ ಅಂಕಗಳನ್ನು ಕಲೆ ಹಾಕಲು ಅವಕಾಶವಿರುತ್ತದೆ.

ಮೈ ನೆಟ್ ವರ್ಕ್ ಫೀಡ್‍ಗಳು ಬಳಕೆದಾರರೇ ಸೃಷ್ಟಿಸಿದ ಮಾಹಿತಿಗಳಾಗಿರುವುದರಿಂದ, ಇದು ಸುಳ್ಳು ಸುದ್ದಿಗಳಾಗಿರುವ ಸಾಧ್ಯತೆ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಧಾರ್ಮಿಕವಾಗಿಯೂ ಉದ್ವಿಗ್ನತೆಯನ್ನು ಮೂಡಿಸುವಂಥದ್ದಾಗಿರುತ್ತದೆ.

ಬನ್ಸಾಲ್ ವರದಿಯಲ್ಲಿ ಅಂಥ ಒಂದು ಪೋಸ್ಟ್ ನ ಉಲ್ಲೇಖವಿದೆ. ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು, ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಒಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿತ್ತು. ವಾಸ್ತವವಾಗಿ ಧರ್ಮಗಳ ಆಧಾರದ ಮತ ಚಲಾವಣೆ ಮಾಹಿತಿಯನ್ನು ಎಂದೂ ಭಾರತದ ಚುನಾವಣಾ ಆಯೋಗ ಬಿಡುಗಡೆ ಮಾಡಿಯೇ ಇಲ್ಲ.

ವಿರೋಧ ಪಕ್ಷವಾದ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್‍ ಗಾಂಧಿಯವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಕುಳಿತಿದ್ದು, ಅವರ ಹಿಂದೆ ಮೊಘಲ್ ಚಕ್ರವರ್ತಿಯ ಕಲಾಕೃತಿ ಇದೆ ಎಂದು ಮತ್ತೊಂದು ಪೋಸ್ಟ್ ನಲ್ಲಿ ಹೇಳಲಾಗಿತ್ತು. ಈ ಚಿತ್ರವನ್ನು ಹಲವು ವರ್ಷಗಳ ಹಿಂದೆಯೇ ಬೂಮ್‍ಲೈವ್ ವೆಬ್‍ಸೈಟ್‍ ನ ಸತ್ಯಶೋಧನಾ ತಂಡ ನೈಜ ಚಿತ್ರವಲ್ಲ ಎಂದು ತಳ್ಳಿಹಾಕಿತ್ತು. ಫೋಟೊಶಾಪ್ ಮೂಲಕ ಕಲಾಕೃತಿಯನ್ನು ತಿರುಚಲಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮಗಾಂಧಿಯವರ ಜಾಗದಲ್ಲಿ ಈ ಕಲಾಕೃತಿಯನ್ನು ತೋರಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

ಮತ್ತೊಂದು ಪೋಸ್ಟ್ ಪ್ರತಿಪಾದಿಸಿರುವಂತೆ, ಬಿಬಿಸಿ ಪ್ರಕಾರ, ಕಾಂಗ್ರೆಸ್ ಪಕ್ಷ ವಿಶ್ವದ ನಾಲ್ಕನೇ ಅತಿ ಭ್ರಷ್ಟ ಪಕ್ಷ. ವಾಸ್ತವವಾಗಿ ಅಂಥ ವರದಿಗಳು ಯಾವುದೇ ಸುದ್ದಿಸಂಸ್ಥೆಗಳಿಂದ ಇದುವರೆಗೆ ಪ್ರಕಟವಾಗಿಲ್ಲ. ಆದರೆ ಇಂಥ ಪೋಸ್ಟ್‍ಗಳನ್ನು ಹಾಕುವಲ್ಲಿ ಯಾವ ತಪ್ಪೂ ಇಲ್ಲ ಎನ್ನುವುದು ಬಿಜೆಪಿ ಪ್ರತಿಪಾದನೆ.

"ಭಾರಿ ಪ್ರಮಾಣದ ಮಾಹಿತಿಗಳನ್ನು ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಅಭಿಮಾನಿಗಳು ಮುಕ್ತವಾಗಿ ಪೋಸ್ಟ್ ಮಾಡುವಾಗ ಕೆಲವೊಂದು ತಪ್ಪು ಮಾಹಿತಿಗಳು ಪ್ರಸಾರವಾಗುವ ಸಾಧ್ಯತೆ ಇದ್ದೇ ಇದೆ" ಎಂದು ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ, ಬನ್ಸಾಲ್ ಅವರ ಮೈ ನೆಟ್ ವರ್ಕ್ ಕುರಿತ ಪ್ರಶ್ನೆಗೆ ಉತ್ತರಿಸಿದ್ದರು.

ಆದರೆ ಸತ್ಯಶೋಧನಾ ವೆಬ್‍ಸೈಟ್ altnews.in ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಅವರ ಪ್ರಕಾರ, ಬಳಕೆದಾರರು ಸೃಷ್ಟಿಸುವ ಮಾಹಿತಿಯಾಗಿರುವುದರಿಂದ ತಪ್ಪು ಮಾಹಿತಿ ಸಾಧ್ಯತೆಗಳಿವೆ ಎನ್ನುವುದು ಸೂಕ್ತ ಸಮರ್ಥನೆಯಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ಮೈ ನೆಟ್ ವರ್ಕ್ ನಲ್ಲಿ ಶೇರ್ ಮಾಡಿರುವ ಬಹುತೇಕ ಸುಳ್ಳುಸುದ್ದಿಗಳು, ಎಲ್ಲ ಆ್ಯಪ್ ಬಳಕೆದಾರರ ಖಾತೆಗಳಿಂದ ಬಂದದ್ದು. ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ತಕ್ಷಣ ಸ್ವಯಂಚಾಲಿತವಾಗಿ ಅವರು ಇದನ್ನು ಖರೀದಿಸಿದಂತಾಗುತ್ತದೆ. ಈ ಖಾತೆಗಳ ಪೈಕಿ ಮೂರು, ‘ದ ಇಂಡಿಯಾ ಐ’, ‘ಮೋದಿ ಭರೋಸಾ’ ಮತ್ತು ‘ಸೋಶಿಯಲ್ ತಮಾಷಾ’ ಇವುಗಳು ಜನಪ್ರಿಯ ಫೇಸ್‍ ಬುಕ್ ಗುಂಪುಗಳಾಗಿದ್ದು, ಇವುಗಳ ಅಂಶಗಳನ್ನು ನಮೋ ಆ್ಯಪ್ ನಲ್ಲಿ ಪೋಸ್ಟ್ ಮಾಡಲಾಗುತ್ತದೆ.

"ಈ ಜನರನ್ನು ಎಲ್ಲೆಡೆ ಕಾಣಿಸಿಕೊಳ್ಳುವಂತೆ ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವಂತೆ ಮಾಡಲು ನಿರ್ದಿಷ್ಟವಾಗಿ ಆಯ್ಕೆ ಮಾಡಲಾಗಿದೆ" ಎನ್ನುವುದು ಸಿನ್ಹಾ ಅವರ ಅಭಿಪ್ರಾಯ. ಆದ್ದರಿಂದ ಅವರು ಬಳಕೆದಾರರು ಮಾಹಿತಿಗಳನ್ನು ಸೃಷ್ಟಿಸುತ್ತಾರೆ ಎನ್ನುವುದು ಇದಕ್ಕೆ ಸಬೂಬು ಆಗುವುದಿಲ್ಲ.

ಬೂಮ್ ಲೈವ್ ಹಾಗೂ altnews.inನಂಥ ಸತ್ಯಶೋಧನಾ ವೆಬ್‍ ಸೈಟ್‍ ಗಳು ಸುಳ್ಳು ಎಂದು ನಿರೂಪಿಸಿದ ಸುದ್ದಿಗಳನ್ನು ಈ ಮೂರು ಪೇಜ್‍ ಗಳು ಶೇರ್ ಮಾಡುತ್ತಲೇ ಇರುತ್ತವೆ. ಉದಾಹರಣೆಗೆ ಇಂಡಿಯಾ ಐ ಫೇಸ್‍ಬುಕ್ ಪೇಜ್‍ನಲ್ಲಿ ಬನ್ಸಾಲ್ ಪತ್ತೆ ಮಾಡಿದಂತೆ, 2018ರ ನವೆಂಬರ್‍ನಿಂದೀಚೆಗೆ ಅತ್ಯಧಿಕ ಶೇರ್ ಮಾಡಲಾದ 20 ಸುದ್ದಿಗಳ ಪೈಕಿ ಆರು ಸುದ್ದಿಗಳು ತಪ್ಪು ಮಾಹಿತಿಯನ್ನು ಒಳಗೊಂಡಿವೆ.

"ಬಳಕೆದಾರರ ಪೋಸ್ಟ್‍ಗಳನ್ನು ಈ ಆ್ಯಪ್ ನಿರಂತರವಾಗಿ ವಿತರಿಸುತ್ತಲೇ ಇರುತ್ತದೆ ಎಂದರೆ, ವಾಸ್ತವವಾಗಿ ಸುಳ್ಳುಮಾಹಿತಿಗಳನ್ನು ಹರಡುವವರನ್ನು ಇವರು ಉತ್ತೇಜಿಸುತ್ತಿದ್ದಾರೆ ಎಂಬ ಅರ್ಥ" ಎಂದು ಸಿನ್ಹಾ ಸ್ಪಷ್ಟಪಡಿಸುತ್ತಾರೆ.

ಪಕ್ಷದ ವ್ಯವಸ್ಥೆಯ ಕ್ರೋಢೀಕರಣ

ನಮೋ ಆ್ಯಪ್ ಕೇವಲ ಮತದಾರರ ಜತೆ ಸಂವಹನಕ್ಕೆ ಮಾತ್ರ ಪ್ರಯೋಜನಕಾರಿಯಾಗಿರದೇ, ಪಕ್ಷದ ಕಾರ್ಯಕರ್ತರನ್ನು ಕ್ರೋಢೀಕರಿಸಲು ಪ್ರಮುಖ ಸಾಧನ ಎನಿಸಿಕೊಂಡಿದೆ. 2016ರಿಂದ ಬಿಜೆಪಿಗೆ ಡಾಟಾ ಅನಾಲಿಸ್ಟಿಕ್ಸ್ ಕಾರ್ಯಕ್ಕೆ ನಿಯೋಜಿತರಾಗಿದ್ದ ಶಿವಂ ಶಂಕರ್ ಸಿಂಗ್ ಅವರ ಪ್ರಕಾರ, ಈ ಆ್ಯಪ್‍ ನ ಒಂದು ಪ್ರಮುಖ ಕಾರ್ಯವೆಂದರೆ, ಪಕ್ಷದ ಕಾರ್ಯಕರ್ತರಿಗೆ ಮಾತ್ರ ನೋಡಬಹುದಾದ ಆಂತರಿಕ ಪ್ಲಾಟ್ ಫಾರಂ. ಈ ಪ್ಲಾಟ್ ಫಾರಂನಲ್ಲಿ, ಉನ್ನತ ಮಟ್ಟದ ವ್ಯಕ್ತಿಗಳು ತಮ್ಮ ಕೆಳಹಂತದ ಕಾರ್ಯಕರ್ತರಿಗೆ ಮಾಹಿತಿಗಳನ್ನು ರವಾನಿಸಬಹುದು".

ಸಿಂಗ್ ಹೇಳುವಂತೆ, ಮುಂದಿನ ತಿಂಗಳುಗಳಲ್ಲಿ, "ಆ್ಯಪ್‍ನ ಈ ಭಾಗವನ್ನು ಮೂಲಭೂತವಾಗಿ, ನೀವು ಇಂಥ ಕಡೆ ಜನಸಮೂಹವನ್ನು ಕ್ರೋಢೀಕರಿಸಬೇಕು ಎಂದು ಹೇಳಲು ಅಥವಾ ಇಂಥ ಫೇಸ್‍ ಬುಕ್ ಪೇಜ್‍ ಗೆ ಫಾಲೊವಿಂಗ್ ಹೆಚ್ಚಿಸುವ ಅಗತ್ಯತೆಯ ಮಾಹಿತಿ ನೀಡಲು, ಇಂಥ ಟ್ವಿಟರ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಬೇಕು ಎಂದು ಹೇಳಲು ಬಳಕೆ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಚುನಾವಣೆ ಕಾವು ಏರಿದಂತೆಲ್ಲ ನಮೋ ಆ್ಯಪ್ ಮಹತ್ವವೂ ಹೆಚ್ಚುತ್ತಲೇ ಹೋಗುತ್ತದೆ ಎನ್ನಬಹುದು.

2018ರ ಏಪ್ರಿಲ್‍ನಲ್ಲ ಬಿಜೆಪಿ ತೊರೆದ ಸಿಂಗ್, ಪಕ್ಷದ ಯೋಜಿತ ಪ್ರಚಾರದ ವೈಖರಿಯ ಬಗ್ಗೆ ಅಸಮಾಧಾನ ಹೊಂದಿದ್ದರು. ಈ ಆ್ಯಪನ್ನು ಕಾರ್ಯಕರ್ತರು ಬಳಕೆ ಮಾಡುವಂತೆ ಹಲವು ಕಾರ್ಯತಂತ್ರಗಳನ್ನು ಜಾರಿಗೊಳಿಸಲಾಗಿತ್ತು. ಇದರ ಉದ್ಯೋಗಿಗಳಿಗೆ ಬಿಜೆಪಿ ವೇತನ ನೀಡಿದ್ದು, ನಿಮ್ಮ ಕೆಲಸ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಫೋನ್‍ ಗೆ ಈ ಆ್ಯಪ್ ಅಳವಡಿಸಿಕೊಳ್ಳುವಂತೆ ಮಾಡುವುದು ಎಂಬ ಒತ್ತಡ ಇತ್ತು ಎಂದು ಸಿಂಗ್ ವಿವರಿಸುತ್ತಾರೆ.

ಆದ್ದರಿಂದ ಅಗ್ರಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿ ಉದ್ಯೋಗಿಗಳು, ಜನ ಈ ಆ್ಯಪ್ ಅಳವಡಿಸಿಕೊಳ್ಳುವಂತೆ ಉತ್ತೇಜಿಸಲು ಜನರಿಗೆ ‘ಉತ್ತೇಜಕ’ಗಳನ್ನು ನೀಡಲು ಆರಂಭಿಸಿದರು ಎಂದು ಸಿಂಗ್ ಹೇಳುತ್ತಾರೆ. ಆದರೆ ಇದುವರೆಗೆ ಮೈ ನೆಟ್ ‍ವರ್ಕ್ ‍ನಲ್ಲಿ ಮಾಹಿತಿಗಳನ್ನು ಹಂಚಿಕೊಂಡಿದ್ದಕ್ಕೆ ಯಾವುದೇ ‘ಆರ್ಥಿಕ ಸ್ವರೂಪದ ಉತ್ತೇಜಕ’ಗಳನ್ನು ನೀಡಿದ್ದು ಗಮನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಈ ಕುರಿತ ಪ್ರಶ್ನಾವಳಿಗೆ ಬಿಜೆಪಿಯ ಮಾಳವೀಯ ತಕ್ಷಣಕ್ಕೆ ಉತ್ತರಿಸಿಲ್ಲ. ಅವರ ಉತ್ತರ ಬಂದ ಬಳಿಕ ಈ ಲೇಖನವನ್ನು ಪರಿಷ್ಕರಿಸಲಾಗುತ್ತದೆ.

Writer - ಆರಿಯಾ ಥಾಕರ್, qz.com

contributor

Editor - ಆರಿಯಾ ಥಾಕರ್, qz.com

contributor

Similar News