×
Ad

ಮುಖ್ಯಮಂತ್ರಿಯೊಂದಿಗಿನ ಸಭೆ ವಿಫಲ: ಪ್ರತಿಭಟನಾಕಾರರ ಬಂಧನ, ಬಿಡುಗಡೆ

Update: 2019-01-30 22:54 IST

ಬೆಂಗಳೂರು, ಜ.28: ಮದ್ಯಪಾನ ನಿಷೇಧ ಮಾಡಬೇಕು ಎಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಜತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ರಾಜ್ಯಾದ್ಯಂತ ಮದ್ಯಪಾನ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸಿದ್ದ ಸಾವಿರಾರು ಮಹಿಳೆಯರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಸಚಿವ ಬಂಡೆಪ್ಪ ಕಾಶೆಂಪೂರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಹೋರಾಟಗಾರರ ನಿಯೋಗವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸೌಧಕ್ಕೆ ಆಹ್ವಾನಿಸಿ ಸಭೆ ನಡೆಸಿದ್ದರು. ಆದರೆ, ಸಭೆಯಲ್ಲಿ ಸಿಎಂ ನಕಾರಾತ್ಮಕವಾಗಿ ಮಾತನಾಡಿದ್ದನ್ನು ಪ್ರತಿಭಟಿಸಿ ನಿಯೋಗ ಹೊರಬಂದಿದೆ.

ಈ ಸಂದರ್ಭದಲ್ಲಿ ವಿಧಾನಸೌಧದ ಬಳಿ ಪ್ರತಿಭಟನೆ ಮುಂದಾಗಿದ್ದ ನಿಯೋಗದ ನಾಯಕರನ್ನು ಅಲ್ಲಿಯೇ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಅನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪದಿದ್ದರಿಂದ ರಂಗಕರ್ಮಿ ಪ್ರಸನ್ನ, ಹೋರಾಟಗಾರರಾದ ಅಭಯ್, ಮಲ್ಲಿಗೆ ಸಿರಿಮನೆ, ಸ್ವರ್ಣ ಭಟ್, ಮೋಕ್ಷಮ್ಮ, ರವಿಕೃಷ್ಣಾರೆಡ್ಡಿ, ಎಸ್.ಎಸ್.ಲಿಂಗೇಗೌಡ, ಎಚ್.ವಿ.ವಾಸು, ಗೌರಿ, ಕೆ.ಆರ್.ಸೌಮ್ಯ ಸೇರಿದಂತೆ ಸುಮಾರು 250 ಪ್ರತಿಭಟನಾಕಾರರನ್ನು ಬಂಧಿಸಿ, ರಾತ್ರಿ 11 ಗಂಟೆ ಸಮಯದಲ್ಲಿ ಬಿಡುಗಡೆ ಮಾಡಲಾಯಿತು.

ಮುಖ್ಯಮಂತ್ರಿ ಕುಮಾರಸ್ವಾಮಿ ಮಾನವೀಯತೆ ಆಧಾರದ ಮೇಲೆ ನಿಮ್ಮ ಮನವಿ ತೆಗೆದುಕೊಳ್ಳುತ್ತೇನೆ. ಅದರ ಮೇಲೆ ನಾನೇನು ಮಾಡಲು ಸಾಧ್ಯವಿಲ್ಲ. ಸುಮ್ಮನೆ ಸಮಯ ಹಾಳು ಮಾಡಬೇಡಿ ಎಂದು ಹೋರಾಟಗಾರರನ್ನು ಹೀಯಾಳಿಸಿದ್ದಾರೆ. ನಾವು ಸಂವಿಧಾನ ಬದ್ಧವಾದ ಹಕ್ಕನ್ನು ಕೇಳುತ್ತಿದ್ದೇವೆ. ಅಲ್ಲದೆ, ನೀವು ಸಮಯಾಕಾಶವನ್ನು ಪಡೆದು ಇದನ್ನು ಮಾಡಿ ಎಂದು ಹೇಳಿದರೂ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಹೀಗಾಗಿ, ನಾವು ಹೋರಾಟ ಮುಂದುವರಿಸಲು ನಿರ್ಣಯಿಸಿದ್ದೆವು. ಆದರೆ, ಏಕಾಏಕಿ ಈ ರೀತಿಯ ಬಂಧನ ಪ್ರಜಾಪ್ರಭುತ್ವದ ವಿರೋಧಿ ಧೋರಣೆಯಾಗಿದೆ ಎಂದು ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News