ಬೆಂಗಳೂರು: ಬೈಕ್‌ಗೆ ಗುದ್ದಿ 4.5 ಲಕ್ಷ ರೂ. ನಗದು ದೋಚಿ ಪರಾರಿ
ಬೆಂಗಳೂರು, ಜ. 30: ಕಾರಿನಲ್ಲಿ ಬಂದ ದುಷ್ಕರ್ಮಿಗಳು, ವ್ಯಕ್ತಿಯೊಬ್ಬರ ಬೈಕ್‌ಗೆ ಗುದ್ದಿ 4.5 ಲಕ್ಷ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಇಲ್ಲಿನ ಸಾದಹಳ್ಳಿ ರಸ್ತೆಯಲ್ಲಿ ನಡೆದಿದೆ.
ಸಾದಹಳ್ಳಿಯಲ್ಲಿ ಸ್ಮಾರ್ಟ್ ಬ್ಯಾಂಕಿಂಗ್‌ನಲ್ಲಿ ಹಣ ವರ್ಗಾವಣೆ ವ್ಯವಹಾರ ಮಾಡುತ್ತಿದ್ದ ಬೈಯ್ಯಪ್ಪನಹಳ್ಳಿ ನಿವಾಸಿ ಜಯರಾಂ ಅವರು ಸಂಬಂಧಿ ನರಸಿಂಹಮೂರ್ತಿ ಅವರ ಜತೆ ಮಂಗಳವಾರ ರಾತ್ರಿ 8:30ರ ಸುಮಾರಿಗೆ ಸಾದಹಳ್ಳಿ ರಸ್ತೆಯಲ್ಲಿ ಬಾಗಲೂರಿನ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಹಿಂದಿನಿಂದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬೈಕ್ ಹಿಂದಿಕ್ಕುವಂತೆ ಮಾಡಿ ಕೆಳಗೆ ಬೀಳಿಸಿದ್ದಾರೆ. ತದನಂತರ ಲ್ಯಾಪ್‌ಟಾಪ್, 4.5 ಲಕ್ಷ ರೂ. ನಗದು ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಯರಾಂ ಅವರು ಮೊದಲ ದಿನ 3 ಲಕ್ಷ 70 ಸಾವಿರ, 2ನೆ ದಿನ 80 ಸಾವಿರ ಸಂಗ್ರಹ ಮಾಡಿದ ಹಣವನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಿದ್ದರು. ಸಾದಹಳ್ಳಿ ರಸ್ತೆಯಲ್ಲಿ ಕತ್ತಲಿದ್ದು, ಅದರ ಲಾಭ ಪಡೆದ ದುಷ್ಕರ್ಮಿಗಳು, ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪರಿಚಯಸ್ಥರೇ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ದೇವನಹಳ್ಳಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಠಾಣಾ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆಂದು ತಿಳಿದುಬಂದಿದೆ.