ಮುಂದಿನ ಹತ್ತು ವರ್ಷಗಳಲ್ಲಿ 20ಸಾವಿರ ಸರಕಾರಿ ಶಾಲೆಗಳು ಬಂದ್: ಎಲ್.ಹನುಮಂತಯ್ಯ

Update: 2019-01-30 17:48 GMT

ಬೆಂಗಳೂರು, ಜ.30: ಸರಕಾರಿ ಶಾಲೆಗಳ ಬಗ್ಗೆ ನಮ್ಮನ್ನಾಳುವ ಸರಕಾರಗಳ ನಿರ್ಲಕ್ಷತೆ ಹೀಗೆಯೆ ಮುಂದುವರೆದರೆ ಮುಂದಿನ 10 ವರ್ಷಗಳಲ್ಲಿ 20ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚಬೇಕಾದ ಅಪಾಯ ಎದುರಾಗಲಿದೆ ಎಂದು ಸಂಸದ ಎಲ್.ಹನುಮಂತಯ್ಯ ಆತಂಕ ವ್ಯಕ್ತಪಡಿಸಿದರು.

ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾಮಾಜಿಕ ಪರಿವರ್ತನಾ ಜನಾಂದೋಲನ ಸಹಯೋಗದಲ್ಲಿ ನಗರದ ಎಸ್ಸಿಎಮ್ ಹೌಸ್‌ನಲ್ಲಿ ಆಯೋಜಿಸಿದ್ದ ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಧನಾತ್ಮಕ ಕೊಡುಗೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಸರಕಾರ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಪುಸ್ತಕ, ಬಿಸಿಯೂಟ, ಶೂ, ಸೈಕಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಆದಾಗ್ಯು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಯಾಕೆ ಸೇರಿಸುತ್ತಿಲ್ಲ ಎಂಬ ವಾಸ್ತವ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದಕ್ಕೆ ಉತ್ತರ ಕಂಡುಕೊಳ್ಳದಿದ್ದರೆ ನಮ್ಮ ಕಣ್ಣ ಮುಂದೆಯೆ ಸರಕಾರಿ ಶಾಲೆಗಳು ನಿರ್ಣಾಮ ಆಗುವುದನ್ನು ನೀಡಬೇಕಾಗುತ್ತದೆ ಎಂದು ಅವರು ಹೇಳಿದರು.

ನಮ್ಮ ಸರಕಾರಗಳು ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಶಿಕ್ಷಣವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿಯೆ ಇಲ್ಲ. ಭಾರತ ಸ್ವಾತಂತ್ರಗೊಂಡ ಆಸುಪಾಸಿನಲ್ಲಿಯೆ ಸ್ವಾತಂತ್ರಗೊಂಡ ಚೀನಾ ಹಾಗೂ ರಶ್ಯಾ ಕೇವಲ 6ವರ್ಷಗಳಲ್ಲಿ ಶೇ.100ರಷ್ಟು ಸಾಕ್ಷರತೆಯನ್ನು ಗಳಿಸಿದವು. ಆದರೆ, ಭಾರತ ಇಂದಿಗೂ ಸಂಪೂರ್ಣ ಸಾಕ್ಷರತೆಯನ್ನು ಗಳಿಸಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದಿಸಿದರು.

ಪ್ರಾಥಮಿಕ ಶಾಲೆ ರಾಷ್ಟ್ರೀಕರಣವಾಗಲಿ: ಸರಕಾರಿ ಶಾಲೆಗಳು ಬಲವರ್ಧನೆಗೊಳ್ಳಬೇಕಾದರೆ ಕನಿಷ್ಠ ಪ್ರಾಥಮಿಕ ಹಂತದವರೆಗಾದರು ಸರಕಾರಿ ಶಾಲೆಗಳನ್ನು ರಾಷ್ಟ್ರೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರ ಪ್ರಯತ್ನ ನಡೆಸಬೇಕು. ಇದರ ಹೊರತು ಅನ್ಯಮಾರ್ಗವಿಲ್ಲವೆಂದು ಅವರು ಹೇಳಿದರು.

ಐಎಎಸ್ ಅಧಿಕಾರಿ ಮಕ್ಕಳು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಅಕ್ಕಪಕ್ಕದಲ್ಲಿ ಕುಳಿತು ಓದುವಂತಹ ವಾತಾವರಣದಲ್ಲಿ ನಿರ್ಮಾಣವಾದರೆ ಮಾತ್ರ ಸಮಾನತೆಗೊಂದು ಅರ್ಥ ಬರುತ್ತೆ. ಇದಕ್ಕೆ ಪೂರಕವಾಗಿ ಪ್ರಾಥಮಿಕ ಹಂತದವರೆಗೆ ಮಾತೃ ಭಾಷೆಯಲ್ಲಿ ಮಾತ್ರ ಶಿಕ್ಷಣ ನೀಡುವಂತಹ ಕಾನೂನು ಜಾರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಾನು ಮುಂದಿನ ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆಂದು ಅವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್.ಜಯಕುಮಾರ್ ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಶಿಕ್ಷಣ ಇಲಾಖೆ ಹಾಗೂ ಸರಕಾರದ ಜವಾಬ್ದಾರಿ ಮಾತ್ರವಲ್ಲ. ರಾಜ್ಯದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರೆ ಒಟ್ಟುಗೂಡಿ ತಮ್ಮೂರಿನ ಶಾಲೆಯನ್ನು ಆಮೂಲಾಗ್ರವಾಗಿ ಅಭಿವೃದ್ಧಿಗೊಳಿಸಿದ್ದಾರೆ. ಈ ಪ್ರಕ್ರಿಯೆ ರಾಜ್ಯಾದ್ಯಂತ ನಡೆಯಬೇಕಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ವಿದ್ಯಾಭ್ಯಾಸ ಕಲಿಸುತ್ತಿವೆ. ಆದರೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕೇವಲ ಬುದ್ಧಿವಂತರನ್ನಾಗಿ ಮಾಡಿದರೆ ಸಾಕಾಗುವುದಿಲ್ಲ. ಅವರನ್ನು ಹೃದಯವಂತರನ್ನಾಗಿ, ಕ್ರಿಯಾಶೀಲರನ್ನಾಗಿ ಮಾಡಬೇಕಾದದ್ದು ಅಗತ್ಯ. ಇಂತಹ ಗುಣಗಳು ಸರಕಾರಿ ಶಾಲೆಗಳಲ್ಲಿ ಮಾತ್ರ ಸಿಗಲು ಸಾಧ್ಯವೆಂದು ಅವರು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ಮಾತನಾಡಿ, ಪೋಷಕರು ಕೇವಲ ಇಂಗ್ಲಿಷ್ ವ್ಯಾಮೋಹಕ್ಕಾಗಿ ಮಾತ್ರವೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆಂಬುದು ಸುಳ್ಳು. ಸರಕಾರಿ ಶಾಲೆಗಳ ಶಿಕ್ಷಕರು ತಮ್ಮ ಕೆಲಸದ ಬಗ್ಗೆ ನಿರ್ಲಕ್ಷ ಧೋರಣೆಯ ಪ್ರಮುಖ ಕಾರಣವಾಗಿದೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿವರ್ತನಾ ಜನಾಂದೋಲನ ರಾಜ್ಯಾಧ್ಯಕ್ಷ ಅಂಬಣ್ಣ ಅರೋಲಿಕರ್, ಜಾನ್ ರಾಬರ್ಟ್ಸ್ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ವೈ.ಮರಿಸ್ವಾಮಿ ಮತ್ತಿತರರಿದ್ದರು.

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರವರು ತಮ್ಮ ರಾಜ್ಯದ ಸರಕಾರಿ ಶಾಲೆಗಳನ್ನು ಅಂತರ್‌ರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಅಭಿವೃದ್ಧಿಗೊಳಿಸಿದ್ದರೆ. ಇದರಿಂದ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಸರಕಾರಿ ಶಾಲೆಯತ್ತ ಧಾವಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ದೇಶದ ಇತರೆ ರಾಜ್ಯಗಳಲ್ಲೂ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಆಯಾ ರಾಜ್ಯ ಸರಕಾರಗಳು ವಿಶೇಷ ಆದ್ಯತೆ ನೀಡಬೇಕಿದೆ.

-ಎಲ್.ಹನುಮಂತಯ್ಯ, ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News