ಫೆ.21 ರಿಂದ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ: 60 ದೇಶಗಳ 200 ಕ್ಕೂ ಅಧಿಕ ಚಿತ್ರಗಳು ಪ್ರದರ್ಶನ

Update: 2019-01-30 18:03 GMT

► ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಪ್ರದರ್ಶನ

ಬೆಂಗಳೂರು, ಜ. 30: ಹನ್ನೊಂದನೇ ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವ ಫೆ.21 ರಿಂದ ಎಂಟು ದಿನಗಳ ಕಾಲ ನಗರದಲ್ಲಿ ನಡೆಸಲು ಸಿಎಂ ಕುಮಾರಸ್ವಾಮಿ ನೇತೃತ್ವದ ಚಲನಚಿತ್ರೋತ್ಸವ ಸಂಘಟನಾ ಸಮಿತಿ ನಿರ್ಧರಿಸಿದೆ.

ನಗರದ ವಾರ್ತಾ ಇಲಾಖೆಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ಕಾರ್ಯದರ್ಶಿ ಅಮರ್‌ಕುಮಾರ್ ಪಾಂಡೆ, ಫೆ. 21 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ದೇಶ-ವಿದೇಶಗಳಿಂದ ಆಗಮಿಸಲಿರುವ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಒರಾಯನ್ ಮಾಲ್‌ನ 11 ಪರದೆಗಳಲ್ಲಿ ಫೆ. 22 ರಿಂದ 60 ದೇಶಗಳ 200ಕ್ಕೂ ಹೆಚ್ಚು ಚಿತ್ರಗಳು ಒಂದೇ ಕಡೆ ಪ್ರದರ್ಶನ ಕಾಣಲಿದ್ದು, ಸುಮಾರು 3000 ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಚಲನಚಿತ್ರೋತ್ಸವದಲ್ಲಿ ಏಷ್ಯಾ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ, ಕನ್ನಡ ಚಿತ್ರಗಳ ಸ್ಪರ್ಧೆ ಹಾಗೂ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ ಸೇರಿದಂತೆ, ನಾಲ್ಕು ಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಅತ್ಯುತ್ತಮ ಚಿತ್ರಗಳನ್ನು ಪ್ರಶಸ್ತಿಗೆ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.

ಅಲ್ಲದೆ, ಸಮಕಾಲೀನ ವಿಶ್ವ ಸಿನಿಮಾ, ದೇಶಕೇಂದ್ರಿತ ಸಿನಿಮಾಗಳಾದ ಪೋಲೆಂಡ್, ಇರಾನ್, ಜರ್ಮನಿ, ಲಾಟಿನ್, ಅಮೆರಿಕದ ಚಿತ್ರಗಳೂ ಪ್ರದರ್ಶನ ಕಾಣಲಿದ್ದು, ಫೆ. 28 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳಿಗೆ ರಾಜ್ಯಪಾಲ ವಜುಬಾಯಿ ವಾಲಾ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ವಿತರಿಸಲಿದ್ದಾರೆ.

ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ದೇಶೀಯ ಸಂಸ್ಕೃತಿಯನ್ನು ಅನಾವರಣ ಮಾಡುವ ಚಿತ್ರಗಳ ಪ್ರದರ್ಶನದ ಜೊತೆಗೆ ದೇಶದಲ್ಲೇ ಹೆಚ್ಚು ಪರಿಚಿತವಲ್ಲದ ಬ್ಯಾರಿ, ಬಂಜಾರ, ಜಸರಿ, ಶೆರುಡು ಪೆನ್, ಖಾಸಿ, ಗಾರೋ, ಮುಂತಾದ ಭಾಷೆಗಳ ಚಿತ್ರಗಳ ವಿಶೇಷ ಭಾಗವೂ ಈ ಬಾರಿ ಇರಲಿದೆ. ಫೆ.21 ಬೆಂಗಳೂರು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆಯ ನೆನಪಿನಲ್ಲಿ ಶ್ಯಾಂ ಬೆನಗಲ್ ಅವರ ಮೇಕಿಂಗ್ ಆಫ್ ಮಹಾತ್ಮ, ಫಿರೋಜ್ ಅಬ್ಬಾಸ್ ಗಾಂಧಿ ಅವರ ಗಾಂಧಿ ಮೈ ಫಾದರ್, ಗಿರೀಶ್ ಕಾಸರವಳ್ಳಿ ಅವರ ಕೂರ್ಮಾವತಾರ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಏಷ್ಯಾ ವಿಭಾಗ ಮತ್ತು ವಿಶ್ವ ಸಿನಿಮಾ ವಿಭಾಗಗಳಿಗೆ ಆಯ್ಕೆಯಾಗಿರುವ ಬಹುತೇಕ ಚಿತ್ರಗಳು ಬರ್ಲಿನ್, ಕಾನ್, ಟೊರೊಂಟೊ, ಗೋವಾ, ಮುಂಬೈ, ಕೇರಳ ಸೇರಿದಂತೆ, ವಿಶ್ವದ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾದ ಚಿತ್ರಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಚಿತ್ರೋತ್ಸವದ ನಿರ್ದೇಶಕ ವಿದ್ಯಾಶಂಕರ್ ಮಾತನಾಡಿ, ಏಷ್ಯಾ ಚಿತ್ರಗಳ ಸ್ಪರ್ಧೆಗೆ 67 ಚಿತ್ರಗಳು ಬಂದಿದ್ದು, ಅವುಗಳಲ್ಲಿ 15 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಾರತೀಯ ಚಿತ್ರ ಸ್ಪರ್ಧೆಗೆ 36 ಚಿತ್ರಗಳ ಪೈಕಿ 12 ಚಿತ್ರಗಳು, ಕನ್ನಡ ಚಿತ್ರಗಳ ಸ್ಪರ್ಧೆಗೆ 68ರ ಪೈಕಿ 16 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಬಾರಿ ಪಿಪ್ರಸ್ಕಿ ಅಂತರ್‌ರಾಷ್ಟ್ರೀಯ ವಿಮರ್ಶ ತಂಡವೊಂದು ಚಿತ್ರೋತ್ಸವದಲ್ಲಿ ಜ್ಯೂರಿಯಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.

ಫೆ.1 ರಿಂದ ನೋಂದಣಿಗೆ ಅವಕಾಶ

ಜ.31 ರಿಂದ ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಫೆ. 1 ರಿಂದ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರ ಫಿಲಂ ಸೊಸೈಟಿಯಲ್ಲಿ ಹೆಸರು ನೋದಾಯಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News