ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಪಟ್ಟಿ ವಿಚಾರ: ರಾಜ್ಯ ಚುನಾವಣಾ ಆಯೋಗದಿಂದ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ

Update: 2019-01-30 18:25 GMT

ಬೆಂಗಳೂರು, ಜ.30: ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿಯನ್ನು ಮರುನಿಗದಿಗೊಳಿಸಿ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಲು ರಾಜ್ಯ ಸರಕಾರಕ್ಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ಬುಧವಾರ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಇದೇ ಮಾರ್ಚ್‌ನಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 101 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆಯನ್ನು ರದ್ದುಪಡಿಸಿ ಜ.14ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ಈ 13 ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲಾತಿಯನ್ನು ಮರುನಿಗದಿಗೊಳಿಸಿ ವಿವರಗಳನ್ನು ಜ.28ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.

 ಆದರೆ, ರಾಜ್ಯ ಸರಕಾರ ಇಲ್ಲಿಯತನಕ ಪರಿಷ್ಕೃತ ಮೀಸಲಾತಿ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ರಾಜ್ಯ ಚುನಾವಣಾ ಆಯೋಗ, ಇನ್ನೆರಡು ದಿನಗಳಲ್ಲಿ ಪಟ್ಟಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕ್ಕೆ ನಿರ್ದೇಶನ ನೀಡಬೇಕು. ಸಮಯ ಬಹಳ ಕಡಿಮೆ ಇರುವುದರಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಕಷ್ಟವಾಗಲಿದೆ. ಅಲ್ಲದೇ ಲೋಕಸಭೆ ಚುನಾವಣೆ, ಎಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳು ಸನಿಹದಲ್ಲಿವೆ ಎಂದು ಆಯೋಗ ಮಧ್ಯಂತರ ಅರ್ಜಿಯಲ್ಲಿ ಹೇಳಿಕೊಂಡಿದೆ. ಗುರುವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News