ಮಹಾಭಾರತ ಕಾಲದಲ್ಲಿ ಇಂಟರ್ನೆಟ್ ಇತ್ತೇ?: ನೊಬೆಲ್ ಪುರಸ್ಕೃತ ಡಾ.ವೆಂಕಿ ರಾಮಕೃಷ್ಣನ್ ಉತ್ತರ ಇಲ್ಲಿದೆ

Update: 2019-01-31 06:16 GMT

ಹೊಸದಿಲ್ಲಿ, ಜ.31: ಮಹಾಭಾರತದ ಕಾಲದಲ್ಲೂ ಇಂಟರ್ನೆಟ್ ಇತ್ತು ಹಾಗೂ ಪುರಾಣ ಕಾಲದಲ್ಲೂ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗುತ್ತಿತ್ತೆಂಬುದಕ್ಕೆ ಗಣೇಶನೇ ಸಾಕ್ಷಿ ಎಂಬಿತ್ಯಾದಿ ಆಕರ್ಷಕ ಹೇಳಿಕೆಗಳು ಕೆಲ ಗಣ್ಯರಿಂದ ಮುಖ್ಯವಾಗಿ ಇಂಡಿಯನ್ ಸಾಯನ್ಸ್ ಕಾಂಗ್ರೆಸ್ ನಂತಹ ಪ್ರತಿಷ್ಠಿತ ವೇದಿಕೆಗಳಲ್ಲೂ ಕೇಳಿ ಬಂದು ಸಾಕಷ್ಟು ಚರ್ಚೆಗೀಡಾಗಿವೆ. ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳಲ್ಲಿ ಎಷ್ಟು ವಾಸ್ತವವಿದೆ ಎಂಬ ಬಗ್ಗೆ ಸುದ್ದಿವಾಹಿನಿ ಎನ್‌ಡಿಟಿವಿ ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ಡಾ.ವೆಂಕಿ ರಾಮಕೃಷ್ಣನ್ ಅವರನ್ನು ಮಾತನಾಡಿಸಿದೆ.

ಎನ್‌ಡಿಟಿವಿ ಶೋ ಒಂದರಲ್ಲಿ ಭಾಗವಹಿಸಿದ ಡಾ.ರಾಮಕೃಷ್ಣನ್ ಮೇಲಿನ ಹೇಳಿಕೆಗಳೆಲ್ಲವೂ ‘‘ವಿಜ್ಞಾನವಲ್ಲದ ಅಸಂಬದ್ಧ’’ ಎಂದು ಬಣ್ಣಿಸಿದ್ದಾರಲ್ಲದೆ ಯಾವುದೇ ವಿಜ್ಞಾನ ಪರೀಕ್ಷೆಯಲ್ಲಿ ಇವುಗಳು ವಿಫಲವಾಗುತ್ತವೆ ಎಂದಿದ್ದಾರೆ.

ಮಹಾಭಾರತದಲ್ಲಿ ಗಾಂಧಾರಿ 100 ಕೌರವರಿಗೆ ಜನ್ಮ ನೀಡಿದ್ದು ಟೆಸ್ಟ್ ಟ್ಯೂಬ್ ತಂತ್ರಜ್ಞಾನದ ಒಂದು ಉದಾಹರಣೆ’, ಎಂದು ಆಂಧ್ರ ವಿಶ್ವವಿದ್ಯಾನಿಲಯದ ಉಪಕುಲಪತಿ ಜಿ.ನಾಗೇಶ್ವರ ರಾವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ‘ಜೀನ್ ಮಶೀನ್’ ಕೃತಿಯ ಲೇಖಕರೂ ಆಗಿರುವ ರಾಮಕೃಷ್ಣನ್, ‘‘ಇದು ಸಂಪೂರ್ಣ ಅಸಂಬದ್ಧ’’ ಎಂದರಲ್ಲದೆ ಇಂತಹ ಕಥೆಗಳನ್ನು ‘ಸಾಂಕೇತಿಕ’ ಎಂದು ಪರಿಗಣಿಸಬೇಕೇ ಹೊರತು ‘ನಿಜ’ವೆಂದಲ್ಲ ಎಂದರು.

ಮಹಾಭಾರತ ನಿಜವಾಗಿಯೂ ನಡೆದಿತ್ತೆಂಬುದು ಸತ್ಯ ಎಂದು ಒಪ್ಪಕೊಂಡರೂ ಅದು ವಿಜ್ಞಾನವೆಂದು ಹೇಳಲು ಸಾಧ್ಯವಿಲ್ಲ ‘‘ವಿಜ್ಞಾನವೆಂದರೆ ಏನನ್ನಾದರೂ ಮಾಡಿದಾಗ ಅದನ್ನು ಪ್ರಯೋಗದ ಮೂಲಕ ಪರೀಕ್ಷಿಸುವಂತಾಗಿರಬೇಕು. ತಜ್ಞರು ಅದನ್ನು ಓದಿ ಅಂತೆಯೇ ಮತ್ತೆ ಮಾಡುವಂತಿರಬೇಕು. ಹೀಗೆ ಜನರು ಐವಿಎಫ್ ಮತ್ತು ಟೆಸ್ಟ್ ಟ್ಯೂಬ್ ಬಗ್ಗೆ ಮಾತನಾಡಿದಾಗ ಅದನ್ನು ಹೇಗೆ ಮಾಡಲಾಯಿತು ಎಂದು ವಿವರಿಸಿ ಇಂದೂ ಹಾಗೆಯೇ ಮಾಡಬಹುದೆಂದಾದರೆ ಮಾತ್ರ ಅದು ವಿಜ್ಞಾನ, ಇಲ್ಲದೇ ಇದ್ದಲ್ಲಿ ಅದು ವಿಜ್ಞಾನವಾಗಲು ಸಾಧ್ಯವಿಲ್ಲ’’ ಎಂದರು.

‘‘ಜನರು ಪುರಾಣ ಕಾಲದಲ್ಲೂ ವಿಮಾನಗಳಿದ್ದವು ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಅವುಗಳನ್ನು ಹೇಗೆ ನಿರ್ಮಾಣ ಮಾಡಲಾಯಿತು ಹಾಗೂ ಈಗಲೂ ಅವುಗಳನ್ನು ಹೇಗೆ ನಿರ್ಮಿಸಬಹುದು ಎಂದು ಹೇಳದೇ ಇದ್ದರೆ ಅದು ವಿಜ್ಞಾನವಾಗಲು ಸಾಧ್ಯವಿಲ್ಲ. ವಿಜ್ಞಾನವೆಂದರೆ ಪ್ರಯೋಗ, ಪುರಾವೆ ಹಾಗೂ ಇದನ್ನು ಇನ್ನೊಬ್ಬರೂ ಮಾಡುವಂತಿರಬೇಕು. ಅಸಲಿ ವಿಜ್ಞಾನವನ್ನು ನಕಲಿ ವಿಜ್ಞಾನದಿಂದ ಪ್ರತ್ಯೇಕಿಸುವ ಮೂಲಭೂತ ಅಂಶ ಇದಾಗಿದೆ’’ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಮಹಾಭಾರತದ ಕರ್ಣ ಸ್ಟೆಮ್ ಸೆಲ್ ತಂತ್ರಜ್ಞಾನದ ಮೂಲಕ ಹುಟ್ಟಿದ್ದೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಡಾ.ರಾಮಕೃಷ್ಣನ್, ‘‘ಸ್ಟೆಮ್ ಸೆಲ್ ಎಂಬ ಬಗ್ಗೆ 1600ರ ತನಕ ಯಾರಿಗೂ ತಿಳಿದಿರಲಿಲ್ಲ ಹಾಗೂ ಈಗಿನಂತೆ ಜೀವಕೋಶ(ಸೆಲ್)ಗಳನ್ನು ನೋಡಲು ಆಗ ಮೈಕ್ರೋಸ್ಕೋಪ್ ಕೂಡ ಇರಲಿಲ್ಲ, ಮೇಲಾಗಿ ಜಿವಕೋಶಗಳೇನೆಂದೂ ತಿಳಿದಿರದ ಸಾವಿರಾರು ವರ್ಷಗಳ ಹಿಂದೆ ಸ್ಟೆಮ್ ಸೆಲ್ ತಂತ್ರಜ್ಞಾನವಿತ್ತೆಂಬ ಮಾತು ಗೊಂದಲ ಮೂಡಿಸುತ್ತದೆ’’ ಎಂದರು.

ಮಹಾಭಾರತ ಕಾಲದಲ್ಲೂ ಅಂತರ್ಜಾಲವಿತ್ತೆಂಬ ತ್ರಿಪುರಾ ಸಿಎಂ ವಿಪ್ಲವ್ ದೇಬ್ ಹೇಳಿಕೆ ಬಗ್ಗೆ ಏನನ್ನುತ್ತೀರಿ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಹೀಗಿತ್ತು, ‘‘ಆಗ ಅಂತರ್ಜಾಲ ಇದ್ದರೆ ಉಪಗ್ರಹ ತಂತ್ರಜ್ಞಾನದ ಮೂಲವಾದ ನ್ಯೂಟನ್ ನ ಚಲನೆಯ ಸಿದ್ಧಾಂತದ ಬಗ್ಗೆ ಆಗ ಯಾರೂ ಏಕೆ ವಿವರಿಸಿಲ್ಲ? ತಂತ್ರಜ್ಞಾನವೆಂದರೇನು ಎಂಬ ಬಗ್ಗೆ 1800ರ ತನಕ ಅಥವಾ 19ನೇ ಶತಮಾನದ ಆರಂಭದಲ್ಲೂ ಯಾರಿಗೂ ಏನೂ ತಿಳಿದಿರಲ್ಲ. ಅಂತರ್ಜಾಲವಿತ್ತೆಂದಾದರೆ ಆಗ ಕಂಪ್ಯೂಟರ್ ನಿರ್ಮಾಣವೂ ಗೊತ್ತಿತ್ತೇ ಎಂಬ ಪ್ರಶ್ನೆಯೂ ಏಳುತ್ತದೆ. ಇವೆಲ್ಲವೂ ಸಂಪೂರ್ಣ ಅಸಂಬದ್ಧ. ಇದನ್ನೆಲ್ಲಾ ಏಕೆ ಹೇಳುತ್ತಿದ್ದಾರೆಂದು ತಿಳಿಯದು. ಭಾರತೀಯರು ಇಂತಹ ಮನೋಭಾವವನ್ನು ಬಿಟ್ಟು ಬಿಡಬೇಕು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News