ಮಿತ್ರನಿಗೆ ತಪ್ಪಿದ ಬಾಲ್ ಶಕ್ತಿ ಪುರಸ್ಕಾರ್: ಪ್ರಶಸ್ತಿ ಪುರಸ್ಕೃತ ನಚಿಕೇತ್ ಹೇಳುವುದೇನು?

Update: 2019-01-31 14:16 GMT

ನಾನು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ. ಈ ಬಾರಿಯ ಬಾಲ್ ಶಕ್ತಿ ಪುರಸ್ಕಾರ್ ಪ್ರಶಸ್ತಿ ಪುರಸ್ಕೃತ ಎಯು ನಚಿಕೇತ್ ಕುಮಾರ್ ಎಂಬ ನಾನು ನೀಡುವ ಸತ್ಯಾಧಾರಿತ ವಿಚಾರವೆಂದರೆ.

ದಿನಾಂಕ 30/1/2019 ರಂದು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಯಾದ ನನ್ನ ನಲ್ಮೆಯ ಗೆಳೆಯನಾದ ಅಮನ್ ಕೆ ಮತ್ತಾತನ ತಂದೆ ಹಾಗೂ ಅಜ್ಜ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಈ ಬಾರಿಯ ಬಾಲ್ ಶಕ್ತಿ ಪುರಸ್ಕಾರ್ ಪ್ರಶಸ್ತಿ ದೊರೆಯದಿರುವ ಬಗ್ಗೆ ವ್ಯಕ್ತಪಡಿಸಿದ ನೋವಿನ ಬಗ್ಗೆ ನನ್ನ ಸಹಾನುಭೂತಿ ಇದೆ. ನಾವಿಬ್ಬರೂ ಮಂಡಿಸಿದ ಬಿಂಬುಲಿ ಹಣ್ಣಿನ ರಸದಿಂದ ತಯಾರಿಸಬಹುದಾದ ರಬ್ಬರ್ ಶೀಟ್ ಪ್ರಯೋಗದ ಸಂಶೋಧನಾ ವರದಿ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುವುದು ನಿಜ. ವಿಜ್ಞಾನ ಕ್ಷೇತ್ರದಲ್ಲಿ ನೀಡುವ ಪ್ರಶಸ್ತಿಯು ಯಾವುದೇ ಒಂದು ನಿರ್ದಿಷ್ಠ ಕಾರ್ಯಚಟುವಟಿಕೆಯನ್ನು ಆಧರಿಸದೆ ವಿದ್ಯಾರ್ಥಿಯ ಸಮಗ್ರ ಸಾಧನೆಯನ್ನು ಆಧರಿಸಿ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಅಂತರಾಷ್ಟ್ರೀಯ, ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಾಧನೆಗಳ ವಿವರವನ್ನು ಸಂಬಂಧಿತ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತೀಕರಿಸಬೇಕಾಗಿದೆ.

ನಿಯಮಾನುಸಾರ ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ನಮ್ಮಿಬ್ಬರ ಪೈಕಿ ನನ್ನಲ್ಲಿ ವಿಜ್ಞಾನ ವಿಭಾಗದಲ್ಲಿ ಸ್ಪರ್ಧಿಸಿ ಬಹುಮಾನ ಗಳಿಸಿದ ಪ್ರಮಾಣ ಪತ್ರಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರಶಸ್ತಿ ನನಗೊಲಿದಿದೆ ಎನ್ನುವುದು ನನ್ನ ಭಾವನೆ. ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರ ಎಲ್ಲಾ ಸಾಧನೆಗಳನ್ನು ಉಲ್ಲೇಖಿಸದೆ, ಸಾಧನೆಗಳ ಪೈಕಿ ಉತ್ಕೃಷ್ಠ ಸಾಧನೆಯೊಂದನ್ನು ಸಂಕ್ಷಿಪ್ತವಾಗಿ ಉಲ್ಲೇಖೀಸುವ ನಿಯಮದಿಂದಾಗಿ ನನ್ನ ಒಟ್ಟು ಸಾಧನೆಗಳ ಪೈಕಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ರಬ್ಬರ್ ಶೀಟ್ ಪ್ರಯೋಗವನ್ನು ಮಾತ್ರ ನನ್ನ ಪ್ರಶಸ್ತಿಯೊಂದಿಗೆ ಉಲ್ಲೇಖಿಸಲಾಗಿತ್ತು.

ಹೀಗೆ ಉಲ್ಲೇಖಿಸಲಾದ ಮಾಹಿತಿಯನ್ನು ತಿಳಿದು ನನ್ನ ಸಹಪಾಠಿ ಅಮನ್ ನ ಹೆತ್ತವರು 'ಪ್ರಶಸ್ತಿಯು ಕೇವಲ ಆ ಒಂದು ಪ್ರಯೋಗಕ್ಕೆ ಮಾತ್ರ ಲಭಿಸಿದೆ. ಈ ಪ್ರಯೋಗದಲ್ಲಿ ಸಹ ಭಾಗಿಯಾದ ಅವರ ಮಗನಿಗೆ ಪ್ರಶಸ್ತಿ ದೊರೆಯದೆ ಅನ್ಯಾಯವಾಗಿದೆ' ಎಂದು ಭಾವಿಸಿರಬೇಕೆಂದು ನಾನು ತಿಳಿದಿದ್ದೆ. ಈ ರೀತಿಯ ಭಾವನೆ ಮೂಡಿದಾಗ ನೋವು ನಿರಾಶೆ ಮೂಡುವುದು ಮಾನವ ಸಹಜವೂ ಹೌದು. ಆದರೆ ಈ ನೋವು ವ್ಯಕ್ತಪಡಿಸುವ ಸಂದರ್ಭದಲ್ಲಿ ಅವರಿಂದ ವ್ಯಕ್ತವಾಗಿದೆ ಎಂದು ಪ್ರಕಟವಾದ ವರದಿಯಲ್ಲಿನ ಕೆಲವೊಂದು ಅಂಶಗಳು ನನ್ನನ್ನು ಅತೀವ ದುಃಖಕ್ಕೆ ಕಾರಣವನ್ನಾಗಿಸಿದೆ. ಮೊದಲನೆಯದಾಗಿ ಬಿಂಬುಲಿ ಹಾಗೂ ರಬ್ಬರ್ ಶೀಟ್ ಯೋಜನೆಯಲ್ಲಿ ಪ್ರಮುಖ ಮತ್ತು ಸಹಾಯಕ ಎಂಬ ಸ್ಥಾನವೇ ಇರಲಿಲ್ಲ. ನಾವಿಬ್ಬರೂ ಒಟ್ಟಾಗಿಯೇ ಸಂಶೋಧನೆ ನಡೆಸಿದ್ದು, ನನ್ನ ಪಾತ್ರ ಪ್ರಥಮ ಶ್ರೇಣಿಯದ್ದಾಗಿತ್ತು ಎಂದು ನಾನು ಹೇಳಲಾರೆ; ಆದರೆ ದ್ವಿತೀಯ ಶ್ರೇಣಿಯಂತೂ ಖಂಡಿತ ಆಗಿರಲಿಲ್ಲ. ಎರಡನೇಯದಾಗಿ ಕೇವಲ ಬಿಂಬುಲಿ ಹಣ್ಣಿನ ಅಗತ್ಯತೆಗಾಗಿ ನನ್ನನ್ನು ಸಹ ವ್ಯಕ್ತಿಯನ್ನಾಗಿ ಸೇರಿಸಿಕೊಂಡಿರುವುದು ಎಂಬ ವಿಚಾರ.

ಯೋಜನೆಯ ಮೂಲ ಸ್ವರೂಪ ಬಿಂಬುಲಿ ಹಣ್ಣಿನಿಂದ ವೆನಿಗರ್ ತಯಾರಿಸುವ ಬಗ್ಗೆಯಾಗಿತ್ತು. ಆದರೆ ವೈದ್ಯಕೀಯ ಪರೀಕ್ಷಾ ವರದಿ ಪೂರಕವಾಗಿಲ್ಲದ ಕಾರಣ ಕೊನೆಯ ಕ್ಷಣದಲ್ಲಿ ಬಿಂಬುಲಿ ಹಣ್ಣಿನ ರಸ ಹಾಗೂ ರಬ್ಬರ್ ಶೀಟ್ ತಯಾರಿಕೆಯ ಪ್ರಯೋಗವನ್ನು ಮಂಡಿಸಿರುವುದಾಗಿದೆ. ಸಮಗ್ರ ಸಂಶೋಧನಾ ವರದಿಯನ್ನು ಸಿದ್ದ ಪಡಿಸಿ ಪುತ್ತೂರಿನಲ್ಲಿ ನಡೆದ ರೀಜನಲ್ ವಿಭಾಗದ ಸ್ಪರ್ಧೆಗೆ ಹೋಗಬೇಕಾದ ದಿನ ನನಗೆ ಸ್ಕೌಟ್ ವಿಭಾಗದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗಿದ್ದರಿಂದ ಸ್ಪರ್ಧಾ ಕಣಕ್ಕೆ ಅಮನ್ ಮಾತ್ರ ಹೋಗಿದ್ದರು. ಸಂಶೋಧನೆಯಲ್ಲಿ ನನ್ನ ಪಾತ್ರವೂ ಇದ್ದ ಕಾರಣ ಅಲ್ಲಿ ದೊರೆತ ಪ್ರಶಸ್ತಿ ಪತ್ರದಲ್ಲಿ ನನ್ನ ಹೆಸರೂ ಉಲ್ಲೇಖವಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಅವರ ಮಗನೊಬ್ಬನೇ ಪ್ರಯೋಗ ಸಿದ್ದಪಡಿಸಿದ್ದೇ ಆಗಿದ್ದಲ್ಲಿ ನನಗ್ಯಾಕೆ ಪ್ರಶಸ್ತಿ ಪತ್ರ- ಪದಕ ನೀಡುತ್ತಿದ್ದರು ?

ಸಂಶೋಧನೆಗೆ ಅಗತ್ಯವಾದ ಬಿಂಬುಲಿ ಹಣ್ಣು ನನ್ನ ಮನೆಯಲ್ಲಾಗಲಿ, ಅಮನ್ ಮನೆಯಲ್ಲಾಗಲಿ ಇರಲಿಲ್ಲ. ನಾವಿಬ್ಬರೂ ನಮ್ಮ ನಮ್ಮ ಸ್ನೇಹಿತರ ಮನೆಯಿಂದಲೇ ಪಡೆದುಕೊಳ್ಳುತ್ತಿದ್ದೆವು. ಪ್ರಯೋಗ ನಡೆಸಲು ರಬ್ಬರ್ ಕೃಷಿಯೂ ಕೂಡಾ ನಾವಿಬ್ಬರೂ ಪ್ರಸಕ್ತ ವಾಸಿಸುತ್ತಿರುವ ಮನೆಯಲ್ಲಿ ಇರಲಿಲ್ಲ. ನಾವಿಬ್ಬರೂ ಒಟ್ಟಾಗಿಯೇ ನಮ್ಮ ಸ್ನೇಹಿತ ಆತೀಶ್ ಸೂರ್ಯಖಂಡಿಗನ ಮನೆಯಲ್ಲಿ ರಬ್ಬರ್ ಶೀಟ್ ತಯಾರಿಕ ಸಂಶೋಧನೆಯನ್ನು ನಡೆಸಿರುವುದಾಗಿದೆ. ಸಂಶೋಧನೆಗಾಗಿ ಮಂಗಳೂರು, ಪುತ್ತೂರು, ಸುಳ್ಯ ಮೊದಲಾದ ಹಲವಾರು ಪ್ರಯೋಗಾಲಯಕ್ಕೂ ನಾವಿಬ್ಬರೂ ಒಟ್ಟಾಗಿಯೇ ಹೋಗಿ ಕೆಲಸ ಕಾರ್ಯಗಳನ್ನು ಮಾಡಿರುವಾಗ ಈ ಯೋಜನೆಯಲ್ಲಿ ಮೂಲ ವ್ಯಕ್ತಿ (ಮುಖ್ಯ ರೂವಾರಿ )ಮತ್ತು ಸಹಾಯಕ ವ್ಯಕ್ತಿ ಎಂಬ ಎರಡು ಅಸ್ತಿತ್ವ ಸೃಷ್ಠಿಯಾಗಿರುವುದು ವಿಸ್ಮಯ ಮೂಡಿಸಿದೆ. ಮಾತ್ರವಲ್ಲದೆ ಪ್ರಶಸ್ತಿ ಪುರಸ್ಕೃತ ನನ್ನ ಬಗ್ಗೆ ಸಾರ್ವಜನಿಕವಾಗಿ ತಪ್ಪು ಭಾವನೆ ಮೂಡಿಸುವಂತಿದೆ.

ಪ್ರಶಸ್ತಿ ಬಯಸಿ ನಾವಿಬ್ಬರೂ ಒಟ್ಟಾಗಿಯೇ ಅರ್ಜಿ ಸಲ್ಲಿಸಿದ್ದೆವು. ಅರ್ಜಿಯನ್ನು ಪರಿಶೀಲಿಸಿದ ಆಯ್ಕೆ ಸಮಿತಿಯು ಈ ಬಾರಿ ನನ್ನ ಅರ್ಜಿಯನ್ನು ಪುರಸ್ಕರಿಸಲು ಅರ್ಜಿಯಲ್ಲಿದ್ದ ಸಮಗ್ರ ದಾಖಲೆಗಳು ಕಾರಣವಾಗಿದೆಯೇ ವಿನಃ ಯಾವುದೇ ಶಂಕೆ ಸಂಶಯಗಳು ಕಾರಣವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಲ್ಲಿಸಲ್ಪಡುವ ಅರ್ಜಿಗಳು ಜಿಲ್ಲಾ ಮಟ್ಟದಿಂದ ಶಿಫಾರಸ್ಸುಗೊಂಡು ರಾಜ್ಯ ಮಟ್ಟಕ್ಕೆ, ರಾಜ್ಯಮಟ್ಟದಿಂದ ಶಿಫಾರಸ್ಸುಗೊಂಡು ಕೇಂದ್ರಕ್ಕೆ ರವಾನೆಯಾಗುವುದಾಗಿದೆ. ಈ ಬಾರಿ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬೇಕಾಗಿದ್ದರಿಂದ ಕೇಂದ್ರದಲ್ಲಿಯೂ ಆಯ್ಕೆ ಸಮಿತಿ ಎಲ್ಲಾ ಅರ್ಜಿಗಳ ಮೇಲೂ ಕಣ್ಗಾವಲು ಇರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಶಸ್ತಿ ದೊರೆಯದೇ ಇರುವ ಕಾರಣವನ್ನು ತಿಳಿಯುವುದರಲ್ಲಿ ನ್ಯಾಯವಿದೆ. ಪ್ರಶಸ್ತಿಗಾಗಿ ಹೋರಾಡುವುದರಲ್ಲಿ ನ್ಯಾಯವಿದೆ. ಆದರೆ ಪ್ರಶಸ್ತಿ ಪುರಸ್ಕೃತನನ್ನು ತಪ್ಪು ಮಾಹಿತಿಯೊಂದಿಗೆ ತೇಜೋವಧೆಯಾಗುವ ರೀತಿಯಲ್ಲಿ ಬಿಂಬಿಸುವುದರಲ್ಲಿ ಯಾವ ನ್ಯಾಯವಿದೆ ಸಾರ್?

ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವುದರಿಂದ ಮೊದಲುಗೊಂಡು ನನ್ನ ಆಯ್ಕೆಯ ಸಂದೇಶ ಬರುವ ವರೆಗೆ ನಾವಿಬ್ಬರೂ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಬಳಿಕದ ವಾತಾವರಣ ಹಿತಕರವಾಗಿರಲಿಲ್ಲ. ನಾವು ದೆಹಲಿಯಲ್ಲಿದ್ದ ಸಂದರ್ಭದಲ್ಲೂ ನನ್ನ ಹುಟ್ಟೂರಿನಲ್ಲಿ ಅಹಿತಕರ ವಿದ್ಯಾಮಾನಗಳು ನಡೆಯುತ್ತಿದ್ದ ಬಗ್ಗೆ, ನಾವಿಬ್ಬರೂ ಕಲಿಯುತ್ತಿರುವ ಕಾಲೇಜಿನಲ್ಲಿ ಅನಪೇಕ್ಷಿತ ಒತ್ತಡವೇರುತ್ತಿರುವ ಘಟನೆಗಳ ಬಗ್ಗೆ ಮಾಹಿತಿ ಲಭಿಸುತ್ತಿದ್ದವು. ಘಟನಾವಳಿಗೆ ಸಂಬಂಧಿಸಿ ಸತ್ಯಾ ಅಸತ್ಯದ ಅರಿವು ನಮಗಿರಲಿಲ್ಲ. ಒಂದು ವೇಳೆ ಘಟಿಸಿದ್ದರೂ ನಿರಾಶೆಯ ನೆಲೆಯಲ್ಲಿ ಸಂಭವಿಸಿರಬಹುದೆಂದು ಸುಮ್ಮನಾಗಿದ್ದೆ. ಆದರೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಉಲ್ಲೇಖಿತ ಅಂಶ ನೋವು ಭರಿತ, ಅಸತ್ಯದಿಂದ ಕೂಡಿರುವುದರಿಂದ ನಾನು ಈ ಪ್ರತಿಕ್ರಿಯೆ ನೀಡಬೇಕಾಗಿ ಬಂದಿದೆ. ಈ ಪತ್ರದೊಂದಿಗೆ ನಾನು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಲಗತ್ತೀಕರಿಸುತ್ತಿದ್ದೇನೆ. ಪರಿಶಿಲೀಸಿ ನಿಮಗೆ ಸರಿ ಕಂಡಂತೆ ವ್ಯವಹರಿಸಿ. ಒಟ್ಟಾರೆ ನನಗೆ ದೊರೆತ ಈ ಪ್ರಶಸ್ತಿಯು ನನ್ನ ಬದುಕಿಗೆ ಹೊನ್ನ ಶೂಲವಾಗದಿರಲಿ ಎಂಬುವುದೊಂದೆ ನನ್ನ ಕೋರಿಕೆ.
-ಇತೀ ತಮ್ಮ ವಿಶ್ವಾಸಿ
ಎಯು ನಚಿಕೇತ್ ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News