ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಮಹಿಳೆಗೆ ಮಾರಣಾಂತಿಕ ಹಲ್ಲೆ
Update: 2019-01-31 22:38 IST
ಬೆಂಗಳೂರು, ಜ.31: ಹಳೇ ದ್ವೇಷದ ಹಿನ್ನೆಲೆಯಲ್ಲಿ ಮನೆ ಮುಂದೆ ನಿಂತಿದ್ದ ಮಹಿಳೆಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ತೆಗೆದ ನಾಲ್ವರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿ, ಮನೆ ಕಿಟಕಿ ಗಾಜು ಒಡೆದು ದಾಂಧಲೆ ಎಸಗಿರುವ ಘಟನೆ ಯಶವಂತಪುರ ಬಿ.ಕೆ.ನಗರದಲ್ಲಿ ನಡೆದಿದೆ.
ಯಶವಂತಪುರದ ಬಿ.ಕೆ.ನಗರದ ಬಂಡಪ್ಪಗಾರ್ಡನ್‌ನ ನಿವಾಸಿ ಸುನೀತಾ ಎಂಬುವವರು ‘ಗಲಾಟೆ ಬಿಡಿಸಲು ಬಂದ ನನ್ನ ಮಗಳು ರಮ್ಯಾ ಗೋಪಾಲಕೃಷ್ಣ ಅವರ ಮೇಲೆ, ಯಶವಂತಪುರದ ತಿಲಕ್ ರಾಜ್ ಮತ್ತು ಆತನ ಸ್ನೇಹಿತರಾದ ಭರತ್ ಕುಮಾರ್, ಪೃಥ್ವಿ ಬಂಡಪ್ಪ ಹಾಗೂ ವೆಂಕಟೇಶ್ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಅವಾಚ್ಯ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ‘ಆರೋಪಿತ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 506, 34, 504, 324 ಅಡಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.