ಸ್ವಾರ್ಥಕ್ಕಾಗಿ ದೇವರ ಪ್ರಸಾದದಲ್ಲೂ ವಿಷ ಬೆರೆಸುವವರು!

Update: 2019-01-31 18:33 GMT

ಮಾನ್ಯರೇ,

ಜನ ದೇವಸ್ಥಾನಗಳಿಗೆ ಹೋಗುವುದು ಆ ಸ್ಥಳಗಳಲ್ಲಿ ಸಿಗುವ ನೆಮ್ಮದಿಗಾಗಿ. ಆದರೆ ಅಂತಹ ಸ್ಥಳಗಳಲ್ಲಿಯೇ ಭಕ್ತರಿಗೆ ವಿಷದ ಪ್ರಸಾದ ಸಿಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ.

ದೇವರು ಎಂಬ ನಂಬಿಕೆಗೆ ಇಂದು ಕೆಲವರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇಂದು ದೇವಸ್ಥಾನಗಳಲ್ಲಿ ಕೊಡುವ ಪ್ರಸಾದವನ್ನು ಸ್ವೀಕರಿಸಲೂ ಭಕ್ತರು ಹಿಂದೇಟು ಹಾಕುವಂತಾಗಿದೆ. ರಾಜ್ಯದಲ್ಲಿ ಕಳೆದ ಎರಡು ದುರಂತಗಳು ಜನಸಾಮಾನ್ಯರ ಮನಸ್ಸಿನಲ್ಲಿ ಆತಂಕ ಸೃಷ್ಟಿಸಿವೆ.
 ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿಯ ದೇವಾಲಯ ದಲ್ಲಿ ಪ್ರಸಾದ ಸ್ವೀಕರಿಸಿ 15 ಜನ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಭಕ್ತರನ್ನ್ನು ಆತಂಕಕ್ಕೀಡುಮಾಡಿದೆ. ಚಿಂತಾಮಣಿಯ ಗಂಗಮ್ಮ ದೇವಿಯ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು ಇಬ್ಬರು ಮೃತಪಟ್ಟರೆ 9 ಮಂದಿ ಅಸ್ವಸ್ಥರಾಗಿದ್ದಾರೆ.

ದೇಗುಲಗಳಲ್ಲಿ ದೇವರ ಮೇಲಿನ ಭಕ್ತಿಯಿಂದ ಅಲ್ಲಿ ಕೊಡುವ ಪ್ರಸಾದವನ್ನು ಪಡೆದರೆ, ಇನ್ನು ಕೆಲವು ಬಡಭಕ್ತರು ಅದನ್ನು ಒಂದು ಹೊತ್ತಿನ ಆಹಾರವಾಗಿ ಸೇವಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ದೇವರ ಪ್ರಸಾದ ಸ್ವೀಕರಿಸುವುದಕ್ಕೂ ಕಂಟಕ ಬಂದಿದೆ. ದೇವರ ದರ್ಶನ ಪಡೆಯಲು ಬಂದವರು ದೇವರ ಪಾದ ಸೇರುವಂತಾಗಿದೆ.

ಇತ್ತೀಚೆಗೆ ಹಲವು ದೇವಸ್ಥಾನಗಳಲ್ಲಿ ಆಡಳಿತ ಸಮಿತಿಯನ್ನು ಸ್ಥಾಪಿಸಿಕೊಂಡು ಅಲ್ಲಿನ ಅಧಿಕಾರದ ಗದ್ದುಗೆಗಾಗಿ ಜನರ ನಡುವೆ ವೈಷಮ್ಯ ಉಂಟಾಗುತ್ತಿದೆ. ಗ್ರಾಮ-ಗ್ರಾಮಗಳ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಮತ್ತಿತರ ಕಾರಣಗಳಿಂದಾಗಿ ದುಷ್ಟರು ದೇವರ ಪ್ರಸಾದಕ್ಕೆ ವಿಷವನ್ನು ಹಾಕಲು ಮುಂದಾಗಿದ್ದಾರೆ. ಈ ಎರಡು ದುರಂತಗಳಿಂದ ಭಕ್ತರು ದೇವಸ್ಥಾನಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ದೇವಸ್ಥಾನಕ್ಕ್ಕೆ ಹೋದರೂ ಪ್ರಸಾದವನ್ನು ಸ್ವೀಕರಿಸಲು ಯಾರೂ ಮುಂದಾಗುತ್ತಿಲ್ಲ.

ಆದ್ದರಿಂದ ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಜಾಗೃತರಾಬೇಕು. ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿಯೂ ಸಿಸಿಟಿವಿ ಕ್ಯಾಮರಾ ರಕ್ಷಣೆಯನ್ನು ನೀಡಬೇಕು. ರಾಜ್ಯದ ಪ್ರತಿಯೊಂದು ದೇವಸ್ಥಾನದ ಕಮಿಟಿಗಳಿಗೆ ಸರಕಾರ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಕಾರ್ಯ ನಿರ್ವಹಿಸಬೇಕಾಗಿದೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿಯಾಗುತ್ತಿರುವುದು ವಿಪರ್ಯಾಸವೇ ಸರಿ.

Writer - -ರಶ್ಮಿ ಎಸ್., ಬೆಂಗಳೂರು

contributor

Editor - -ರಶ್ಮಿ ಎಸ್., ಬೆಂಗಳೂರು

contributor

Similar News