200ನೇ ಪಂದ್ಯ ಆಡಿದ ರೋಹಿತ್ ಶರ್ಮಾ

Update: 2019-01-31 18:45 GMT

ಹ್ಯಾಮಿಲ್ಟನ್, ಜ.31: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮಾ ಗುರುವಾರ ನ್ಯೂಝಿಲೆಂಡ್ ವಿರುದ್ಧ ನಾಲ್ಕನೇ ಪಂದ್ಯವನ್ನಾಡುವ ಮೂಲಕ 200ನೇ ಏಕದಿನ ಕ್ರಿಕೆಟ್ ಆಡಿದ ಹಿರಿಮೆಗೆ ಪಾತ್ರರಾದರು.

ರೋಹಿತ್ 200 ಪಂದ್ಯವನ್ನಾಡಿದ ಭಾರತದ 14ನೇ ಹಾಗೂ ವಿಶ್ವದ 79ನೇ ಆಟಗಾರನಾಗಿ ಮೂಡಿಬಂದರು. ಸಚಿನ್ ತೆಂಡುಲ್ಕರ್ ಅತ್ಯಂತ ಹೆಚ್ಚು ಪಂದ್ಯಗಳನ್ನು(463) ಆಡಿದ ಶ್ರೇಯಸ್ಸು ಪಡೆದಿದ್ದಾರೆ.

 ಮುಂಬೈ ದಾಂಡಿಗ ರೋಹಿತ್ 2007ರಲ್ಲಿ ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ತನ್ನ 12 ವರ್ಷಗಳ ವೃತ್ತಿಬದುಕಿನ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಇದೀಗ ಅವರು 48.14ರ ಸರಾಸರಿಯಲ್ಲಿ ಒಟ್ಟು 7,799 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕ ಹಾಗೂ 39 ಅರ್ಧಶತಕಗಳಿವೆ. ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಗಳಿಸಿದ ವಿಶ್ವದ ಮೊದಲ ದಾಂಡಿಗ ರೋಹಿತ್. ಶ್ರೀಲಂಕಾ ವಿರುದ್ಧ ಎರಡು ಹಾಗೂ ಆಸ್ಟ್ರೇಲಿಯ ವಿರುದ್ಧ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್(264)ಗಳಿಸಿದ ವಿಶ್ವದ ಮೊದಲ ದಾಂಡಿಗ ರೋಹಿತ್. 2014ರಲ್ಲಿ ಅವರು ಲಂಕಾ ವಿರುದ್ಧ ಈ ಸಾಧನೆ ಮಾಡಿದ್ದರು.

ರೋಹಿತ್ ನಾಯಕನಾಗಿ 9ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು. ಈ ತನಕ ಅವರು 7ರಲ್ಲಿ ಜಯ, 2ರಲ್ಲಿ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News