ನಿರುದ್ಯೋಗ ತಾಂಡವ: ಸರ್ಕಾರದ ಗಾಯಕ್ಕೆ ನೀತಿ ಆಯೋಗ ಮುಲಾಮು !

Update: 2019-02-01 03:47 GMT

ಹೊಸದಿಲ್ಲಿ, ಫೆ.1: ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯ ಕರಡು ವರದಿ ದೇಶದ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿರುವ ಬೆನ್ನಲ್ಲೇ ನೀತಿ ಆಯೋಗ ಸರ್ಕಾರದ ರಕ್ಷಣೆಗೆ ಧಾವಿಸಿದೆ. ವಿರೋಧ ಪಕ್ಷಗಳ ಟೀಕಾಪ್ರಹಾರದಿಂದ ಸರ್ಕಾರವನ್ನು ಬಚಾವ್ ಮಾಡುವ ಪ್ರಯತ್ನವಾಗಿ, "ಇದು ಕೇವಲ ಕರಡು ವರದಿ" "ಇನ್ನೂ ಇದನ್ನು ದೃಢಪಡಿಸಿಲ್ಲ" ಎಂದು ಉಪಾಧ್ಯಕ್ಷ ರಾಜೀವ್ ಕುಮಾರ್ ಸಬೂಬು ಹೇಳಿದ್ದಾರೆ.

2017-18ರಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇಕಡ 6.1ಕ್ಕೆ ಏರಿದ್ದು, ಇದು ಕಳೆದ 45 ವರ್ಷಗಳಲ್ಲೇ ಗರಿಷ್ಠ ಎಂದು ಎನ್‌ಎಸ್‌ಎಸ್‌ಓ ಕರಡು ವರದಿಯಲ್ಲಿ ಹೇಳಿರುವುದನ್ನು ಉಲ್ಲೇಖಿಸಿ "ಬ್ಯುನಿನೆಸ್ ಸ್ಟ್ಯಾಂಡರ್ಡ್" ವರದಿ ಮಾಡಿತ್ತು. ಇದು ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಸರ್ಕಾರದ ಮಧ್ಯಂತರ ಬಜೆಟ್‌ನ ಮುನ್ನಾದಿನ ಈ ಮಾಹಿತಿ ಸೋರಿಕೆಯಾಗಿದ್ದು, ಮುಂಬರುವ ಮೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 7.8ರಷ್ಟಿದ್ದು, ಯುವ ನಿರುದ್ಯೋಗಿಗಳ ಪ್ರಮಾಣ ಶೇಕಡ 13ರಿಂದ 27ರವರೆಗೂ ಇದೆ ಎಂದು ವರದಿ ಆತಂಕ ವ್ಯಕ್ತಪಡಿಸಿತ್ತು.

ಎನ್‌ಎಸ್‌ಎಸ್‌ಓ ಅಂತಿಮಪಡಿಸಿದ ಉದ್ಯೋಗ ಕುರಿತ ವರದಿಯನ್ನು ಸರ್ಕಾರ ಬಿಡುಗಡೆ ಮಾಡದೇ ಹಿಡಿದಿಟ್ಟುಕೊಂಡಿದೆ ಎಂದು ಆಪಾದಿಸಿ ಸಂಸ್ಥೆಯ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ನೋಟು ರದ್ದತಿ ಬಳಿಕ ದೇಶದಲ್ಲಿ ಉದ್ಯೋಗ ಪ್ರಮಾಣ ತೀವ್ರವಾಗಿ ಕುಸಿದ ಅಂಶವನ್ನು ಒಳಗೊಂಡ ವರದಿಯನ್ನು ಎನ್‌ಎಸ್‌ಎಸ್‌ಓ ಡಿಸೆಂಬರ್‌ನಲ್ಲೇ ಸರ್ಕಾರಕ್ಕೆ ಸಲ್ಲಿಸಿದ್ದರೂ ಅದನ್ನು ಬಿಡುಗಡೆ ಮಾಡಿಲ್ಲ ಎಂದು ಸದಸ್ಯರು ಆಪಾದಿಸಿದ್ದರು.

"ಇದು ಕರಡು ವರದಿ; ಇಲ್ಲಿ ಉಲ್ಲೇಖಿಸಿರುವ ದತ್ತಾಂಶವನ್ನು ಸರ್ಕಾರ ಅಂತಿಮಪಡಿಸಿಲ್ಲ ಅಥವಾ ಅಂಗೀಕರಿಸಿಲ್ಲ. ಆದ್ದರಿಂದ ಈ ದತ್ತಾಂಶ ಸರಿಯಲ್ಲ" ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಈಗ ಸಂಗ್ರಹಿಸಿರುವ ದತ್ತಾಂಶವನ್ನು ಸಂಸ್ಕರಿಸಿ, ಮಾರ್ಚ್‌ನಲ್ಲಿ ಸರ್ಕಾರ ಅಂತಿಮವಾಗಿ ವರದಿ ಬಿಡುಗಡೆ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News