×
Ad

ಅನಂತ್ ಕುಮಾರ್ ಹೆಗಡೆ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

Update: 2019-02-01 22:23 IST

ಬೆಂಗಳೂರು, ಫೆ.1: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪತ್ನಿಯನ್ನು ಅವಮಾನಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ರಾಜಕೀಯವಾಗಿ ಪ್ರಚಾರ ಪಡೆಯುವ ಉದ್ದೇಶದಿಂದ ಅಸಭ್ಯವಾಗಿ ಬರೆದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ಎಚ್.ವಿ.ಭವ್ಯ ಅನು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಸಾಂವಿಧಾನಿಕ ಹುದ್ದೆಯಲ್ಲಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರಾಜಕೀಯವಾಗಿ ಪ್ರಚಾರ ಪಡೆಯುವ ಸಲುವಾಗಿ ಜ.27 ರಂದು ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವ ಕೀಳು ಅಭಿರುಚಿಯ ಟ್ವೀಟ್ ಮಾಡಿರುತ್ತಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಅವರ ಪತ್ನಿ ಟಬುರಾವ್ ಅವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ಕುಹಕದ ಟ್ವೀಟ್ ಮಾಡಿದ್ದಾರೆ.

ಟಬುರಾವ್ ಒಬ್ಬ ಗೃಹಿಣಿಯಾಗಿ ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸದಾಭಿಪ್ರಾಯ, ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅಲ್ಲದೆ, ಟಬುರಾವ್ ಧಾರ್ಮಿಕ ಹಿನ್ನೆಲೆ ಮತ್ತು ಅವರ ವೈಯಕ್ತಿಕ ಬದುಕು ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ಬರಹ ಬರೆಯುವ ಮೂಲಕ ಅವರ ತೇಜೋವಧೆ ಮಾಡಿದ್ದಾರೆ. ಅನಂತ್ ಕುಮಾರ್ ಹೆಗಡೆ ರಾಜಕೀಯವಾಗಿ ಪ್ರಚಾರ ಪಡೆಯುವ ಸಲುವಾಗಿ ಈ ಮುಂಚೆ ಅನೇಕ ಬಾರಿ ಪ್ರಚೋದನಾಕಾರಿ ಹಾಗೂ ಮಹಿಳಾ ಅವಹೇಳನ ಮಾಡುವ ಹೇಳಿಕೆ ಮತ್ತು ಟ್ವೀಟ್ ಮಾಡಿರುತ್ತಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಟಬು ರಾವ್ ಕುರಿತು ಕೋಮು ಭಾವನೆ ಪ್ರಚೋದಿಸಿ ಜನರನ್ನು ಕೆರಳಿಸಿ ಸಾಮರಸ್ಯ ಕದಡುವ ದುರುದ್ದೇಶದಿಂದ ಈ ರೀತಿಯ ಅಸಭ್ಯ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವರ ಈ ಟ್ವೀಟ್‌ನಿಂದ ಟಬು ಅವರಿಗೆ ಮಾನಸಿಕವಾಗಿ ಅತ್ಯಂತ ನೋವುಂಟಾಗಿದೆ. ಹೀಗಾಗಿ, ವಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮೂಲಕ ಅವಮಾನಿಸಿರುವ ಅನಂತ್‌ ಕುಮಾರ್ ಹೆಗಡೆ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News