ವಿಜ್ಞಾನ ವಿಷಯದತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-02-01 17:01 GMT

ಬೆಂಗಳೂರು, ಫೆ.1: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 11ನೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಿಷಯದ ಬಗ್ಗೆ ಇತ್ತೀಚಿನ ವಿದ್ಯಾರ್ಥಿಗಳಿಗೆ ಆಸಕ್ತಿ ಕುಂದಿದೆ. ಹೀಗಾಗಿ ಈ ವಿಷಯ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿದೆ. ಇದರಿಂದ ಭವಿಷ್ಯದಲ್ಲಿ ವಿಜ್ಞಾನ ಶಿಕ್ಷಕರ ಕೊರತೆ ಕಾಡಲಿದೆ ಎಂದು ಹೇಳಿದರು.

ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂದಿನ ಸಾಮಾಜಿಕ ಸಮಸ್ಯೆಗಳಿಗೆ ಸಂಶೋಧನೆ ಮೂಲಕ ಪರಿಹಾರ ಕಂಡು ಹಿಡಿಯಬೇಕಿದೆ. ಉತ್ತಮ ಸಂಶೋಧನೆಗಳಿಗೆ ಸರಕಾರವು 5 ರಿಂದ 50 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲಿದೆ. ಹೀಗಾಗಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಭಾರತಕ್ಕೆ ವಿಜ್ಞಾನದ ಅಡಿಪಾಯವಿದೆ. 21ನೆ ಶತಮಾನ ವಿಜ್ಞಾನದ ಯುಗವಾಗಿದೆ. 30 ವರ್ಷಗಳ ಹಿಂದೆ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಆದರೆ, ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿಂದು ಸ್ವಾವಲಂಬಿಗಳಾಗಿದ್ದೇವೆ. ಅಲ್ಲದೆ ರಫ್ತು ಮಾಡುವ ಸಾಮರ್ಥ್ಯಕ್ಕೆ ತಲುಪಿದ್ದೇವೆ ಎಂದರು. ಇಂದು ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 22 ಪ್ರಾದೇಶಿಕ ಸೈನ್ಸ್ ಸೆಂಟರ್ ತೆರೆಯಲಾಗುತ್ತಿದೆ. ಜೊತೆಗೆ ಮೈಸೂರಿನಲ್ಲಿ 198 ಕೋಟಿ ರೂ.ವೆಚ್ಚದಲ್ಲಿ ಸೈನ್ಸ್ ಸಿಟಿ ತೆರೆಯಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಡಾ.ಬಿ.ವಿ.ಶ್ರೀಕಂಠನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News