ರಾಘವೇಶ್ವರ ಶ್ರೀಗೆ ಬ್ಲಾಕ್ ಮೇಲ್ ಮಾಡಿದ ಆರೋಪ: ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಜಾ

Update: 2019-02-01 17:05 GMT

ಬೆಂಗಳೂರು, ಫೆ.1: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೊನ್ನಾವರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ಮತ್ತು ಅವರ ಪತಿ ದಿವಾಕರ ಶಾಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿ, ಪ್ರಕರಣದ ಇತರ ಆರೋಪಿಗಳಾದ ಮತ್ತು ವಕೀಲರೂ ಆದ ಬಿ.ಟಿ.ವೆಂಕಟೇಶ್ ಮತ್ತು ಗಂಗಾಧರ ಶಾಸ್ತ್ರಿ, ಜ್ಯೋತಿಷಿ ಪದ್ಮನಾಭ ಶರ್ಮ, ಪದ್ಮಶ್ರೀ ಪುರಸ್ಕೃತ ಚ.ಮೂ.ಕೃಷ್ಣಶಾಸ್ತ್ರಿ ವಿರುದ್ಧದ ವಿಚಾರಣೆಯನ್ನು ಕೈಬಿಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

ಪ್ರಮುಖ ಆರೋಪಿಗಳಾದ ಪ್ರೇಮಲತಾ ಶಾಸ್ತ್ರಿ, ದಿವಾಕರ ಶಾಸ್ತ್ರಿ ಮತ್ತು ನಾರಾಯಣ ಶಾಸ್ತ್ರಿ ವಿರುದ್ಧದ ವಿಚಾರಣೆ ಮುಂದುವರಿಯಲಿದೆ. ಈ ಮೂವರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ವಿಚಾರಣೆ ನಡೆಯಲಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಸ್ವಾಮೀಜಿ ಪರ ಕೆ.ಶಂಭು ಶರ್ಮ, ಪ್ರಶಾಂತ ಗೌಡರ ವಕಾಲತ್ತು ವಹಿಸಿದ್ದರು. ಹಿರಿಯ ವಕೀಲ ಎಸ್.ಎಂ.ಚಂದ್ರಶೇಖರ ವಾದ ಮಂಡಿಸಿದರು.

ಪ್ರಕರಣವೇನು: 2014ರಲ್ಲಿ ಕೆಕ್ಕಾರು ಶಾಖಾಮಠದಲ್ಲಿ ನಡೆದ ಚಾತುರ್ಮಾಸ್ಯದ ವೇಳೆ ದಿವಾಕರ ಶಾಸ್ತ್ರಿ ಮತ್ತು ಪ್ರೇಮಲತಾ ಶಾಸ್ತ್ರಿ ಅವರು ಬೆಂಗಳೂರಿನ ಬನಶಂಕರಿ ಪ್ರದೇಶದಿಂದ ಮಠದ ಭದ್ರತಾ ವಿಭಾಗದ ಕಾರ್ಯದರ್ಶಿ ಬಿ.ಆರ್.ಚಂದ್ರಶೇಖರ್ ಅವರಿಗೆ ಕಾಯಿನ್ ಬೂತ್‌ನಿಂದ ಫೋನ್ ಮಾಡಿದ್ದರು. ಸ್ವಾಮೀಜಿ ನಮಗೆ 3 ಕೋಟಿ ಕೊಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಅತ್ಯಾಚಾರದ ಕೇಸು ದಾಖಲಿಸುತ್ತೇವೆ ಎಂದು ಹೇಳಿದ್ದರು ಎಂಬುದಾಗಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್ ದೂರು ದಾಖಲಿಸಿದ್ದರು.

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಪ್ರೇಮಲತಾ ಶಾಸ್ತ್ರಿ ಮತ್ತು ದಿವಾಕರ ಶಾಸ್ತ್ರಿ ಅವರನ್ನು ಬಂಧಿಸಿ ಹಲವು ಸಾಕ್ಷಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಇವರು ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ನಂತರ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ನಡೆಸಿದ ಸಿಐಡಿ ಬಿ.ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಬಿ.ಆರ್.ಚಂದ್ರಶೇಖರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News