ಮಾಹಿತಿಗಳನ್ನು ಅಡಗಿಸುವಲ್ಲಿ ಮೋದಿ ಸರಕಾರ ಹೆಸರುವಾಸಿ: ಸಿಪಿಐ(ಎಂ)
ಬೆಂಗಳೂರು, ಫೆ.1: ಮಾಹಿತಿಗಳನ್ನು ಅಡಗಿಸುವಲ್ಲಿ ಮತ್ತು ತಿರುಚುವಲ್ಲಿ ಜನಗಳಿಗೆ ಜುಮ್ಲಾಗಳನ್ನು ಉಣಬಡಿಸುವಲ್ಲಿ ಮೋದಿ ಸರಕಾರ ಹೆಸರುವಾಸಿಯಾಗಿದೆ. ಈಗ ಪ್ರಕಟಿಸಿರುವ 2019-20ರ ಮಧ್ಯಂತರ ಬಜೆಟ್ ಇದೇ ದಾಟಿಯಲ್ಲಿರುವ ಇನ್ನೊಂದು ಕಸರತ್ತು. ನರಳುತ್ತಿರುವ ದೇಶದ ಜನತೆಯ ಒಂದು ಕ್ರೂರ ಅಪಹಾಸ್ಯ ಎಂದು ಸಿಪಿಐ(ಎಂ) ಹೇಳಿದೆ.
ಸಂಸತ್ತಿನಲ್ಲಿ ಇಂದು ಮಂಡಿಸಿದ ಬಜೆಟ್ ಈ ವರ್ಷದ ಅಂತಿಮ ಬಜೆಟ್ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ಮಂಡಿಸಿರುವ ಸರಕಾರ ಮತ್ತು ಪರಿಶೀಲಿಸುವ ಲೋಕಸಭೆ ಈ ಬಜೆಟ್‌ಗೆ ಸಂಬಂಧಪಟ್ಟ ಹಣಕಾಸು ವರ್ಷದಲ್ಲಿ ಎರಡು ತಿಂಗಳೊಳಗೇ ಅಸ್ತಿತ್ವದಲ್ಲಿ ಇರುವುದಿಲ್ಲ. ಎಪ್ರಿಲ್-ನವಂಬರ್‌ನ ಲಭ್ಯ ಅಂಕಿ-ಅಂಶಗಳ ಪ್ರಕಾರ 2018-19ರಲ್ಲಿ ಕೇಂದ್ರೀಯ ತೆರಿಗೆಗಳಿಂದ ಒಟ್ಟು ಆದಾಯಗಳು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕೇವಲ 7.1% ದಷ್ಟು ಹೆಚ್ಚಿವೆ. ಆದರೆ 2018-19ರ ಪರಿಷ್ಕೃತ ಅಂದಾಜು 2017-18ರ ನಿಜವಾದ ಅಂಕಿ-ಅಂಶಗಳಿಗೆ ಹೋಲಿಸಿದರೆ 17% ದಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಇದರ ನಂತರವೂ ರೆವಿನ್ಯೂ ಆದಾಯಗಳು ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ರೂ. 23,067 ಕೋಟಿಗಳಷ್ಟು ಕಡಿಮೆಯಿರುತ್ತದೆ ಎನ್ನಲಾಗಿದೆ. ಕಳೆದ ವರ್ಷ ತಾನು ಮಾಡಿದ್ದನ್ನು ಪುನರಾವರ್ತಿಸುತ್ತ ಈ ಸರಕಾರ ಈ ವರ್ಷವೂ ಆದಾಯ ತೆರಿಗೆಗಳ ಬಾಬ್ತಿನಲ್ಲಿ ಮತ್ತು ಜಿಎಸ್‌ಟಿ ಆದಾಯ ಬಾಬ್ತಿನಲ್ಲಿ ಆದಾಯಗಳನ್ನು ಉತ್ಪ್ರೇಕ್ಷಿಸಿ ನಮೂದಿಸಿದೆ ಎಂದು ಸಿಪಿಐ(ಎಂ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.