ನೀವು ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬಾರದು

Update: 2019-02-02 18:00 GMT

ಬ್ರೇಕ್‌ಫಾಸ್ಟ್ ಅಥವಾ ಬೆಳಗಿನ ತಿಂಡಿಯು ನಮ್ಮ ದಿನಚರಿಯ ಪ್ರಮುಖ ಭಾಗವಾಗಿದೆ. ಬೆಳಗಿನ ತಿಂಡಿ ಪರಿಪೂರ್ಣವಾಗಿದ್ದರೆ ದಿನವಿಡೀ ಶರೀರವು ಲವಲವಿಕೆಯಿಂದಿರುತ್ತದೆ. ನಾವು ರಾತ್ರಿಯ ನಿದ್ರೆಯಿಂದ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿರುತ್ತೇವೆ. ಈ ಸಮಯದಲ್ಲಿ ನಾವು ಏನನ್ನು ತಿನ್ನುತ್ತೇವೆ ಎನ್ನುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು,ಅದೇ ರೀತಿ ಕೆಟ್ಟದ್ದನ್ನು ಮಾಡುವ ಆಹಾರಗಳೂ ಇವೆ. ಬ್ರೇಕ್‌ಫಾಸ್ಟ್‌ನಲ್ಲಿ ಒಂದು ತಪ್ಪು ಆಹಾರವಿದ್ದರೂ ದಿನವಿಡೀ ಹೊಟ್ಟೆ ಕೆಟ್ಟಿರುತ್ತದೆ.

ಖಾಲಿಹೊಟ್ಟೆಯಲ್ಲಿ ಸೇವಿಸಲೇಬಾರದ ಕೆಲವು ಆಹಾರಗಳ ಕುರಿತು ಮಾಹಿತಿಯಿಲ್ಲಿದೆ......

►ಸಂಬಾರ ಪದಾರ್ಥಗಳು

ಖಾಲಿ ಹೊಟ್ಟೆಯಲ್ಲಿ ಸಂಬಾರ ಪದಾರ್ಥಗಳ ಸೇವನೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದು ಜಠರ ಭಿತ್ತಿಗೆ ಹಾನಿಯನ್ನುಂಟು ಮಾಡುತ್ತದೆ,ಜಠರದಲ್ಲಿ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಜೀರ್ಣ ಸಮಸ್ಯೆಗಳೂ ಕಾಡಬಹುದು. ಆರೋಗ್ಯಯುತ ಜೀರ್ಣ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ದಿನವಿಡೀ ಹೆಚ್ಚಿನ ಸಂಬಾರ ಪದಾರ್ಥಗಳ ಸೇವನೆಯಿಂದ ದೂರವುಳಿಯುವುದು ಒಳ್ಳೆಯದು.

ಸಿಟ್ರಸ್ ಹಣ್ಣುಗಳು

ಕಿತ್ತಳೆ,ಮೂಸುಂಬಿಯಂತಹ ಸಿಟ್ರಸ್ ಹಣ್ಣುಗಳನ್ನು ಸೂಕ್ತವಾದ ಸಮಯದಲ್ಲಿ ಸೇವಿಸುವುದು ಅತ್ಯಂತ ಆರೋಗ್ಯಕರ. ಈ ವರ್ಗಕ್ಕೆ ಸೇರಿದ ಹಣ್ಣುಗಳು ಆಮ್ಲಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಖಾಲಿಹೊಟ್ಟೆಯಲ್ಲಿ ಇವುಗಳ ಸೇವನೆ ಜಠರದಲ್ಲಿ ಆಮ್ಲದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಎದೆಯುರಿ ಹಾಗೂ ಗ್ಯಾಸ್ಟ್ರಿಕ್ ಹುಣ್ಣುಗಳಿಗೆ ಕಾರಣವಾಗುತ್ತದೆ.

ಟೊಮೆಟೊ

ಟೊಮೆಟೊ ಖಾಲಿಹೊಟ್ಟ್ಟೆಯಲ್ಲಿ ಸೇವಿಸಿದರೆ ಅತ್ಯಂತ ಹಾನಿಕಾರಕ ಆಹಾರಗಳಲ್ಲೊಂದಾಗಿದೆ. ಟೊಮೆಟೊದಲ್ಲಿ ಟ್ಯಾನಿಕ್ ಆ್ಯಸಿಡ್ ಹೆಚ್ಚಿನ ಪ್ರಮಾಣದಲ್ಲಿದ್ದು,ಇದು ಜಠರಗರುಳಿನ ಆಮ್ಲಗಳೊಂದಿಗೆ ಸೇರಿ ಕರಗದ ಜೆಲ್‌ಗಳನ್ನು ಸೃಷ್ಟಿಸುತ್ತದೆ ಮತ್ತು ಇದು ಸ್ಟಮಕ್ ಕಾಲ್ಕುಲಸ್ ಅಥವಾ ಜಠರ ಕಲ್ಲುಗಳಿಗೆ ಕಾರಣವಾಗುತ್ತದೆ. ಅದು ಆಮ್ಲೀಯತೆ ಮತ್ತು ಜಠರದ ಹುಣ್ಣುಗಳಿಗೂ ಕಾರಣವಾಗುತ್ತದೆ.

►ಇಂಗಾಲೀಕೃತ ಪಾನೀಯಗಳು

ಇಂಗಾಲೀಕೃತ ಪಾನೀಯಗಳಲ್ಲಿ ಸಕ್ಕರೆ ಮತ್ತು ಕೃತಕ ಸಿಹಿಕಾರಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು,ಇವು ಸಾಕಷ್ಟು ಹಾನಿಕಾರಕವಾಗಿವೆ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇನ್ನಷ್ಟು ಹಾನಿಕಾರಕಗಳಾಗಿವೆ. ಇವುಗಳಲ್ಲಿ ಅಧಿಕ ಪ್ರಮಾಣದಲ್ಲಿರುವ ಇಂಗಾಲೀಕೃತ ಆಮ್ಲಗಳು ಜಠರಾಮ್ಲಗಳೊಂದಿಗೆ ಸೇರಿ ವಾಕರಿಕೆ ಮತ್ತು ಎದೆಯುರಿಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳ ಸೇವನೆಯು ಲೋಳೆಯ ವಪೆಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಪಚನ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಹೆಚ್ಚ್ಚಿನ ಪ್ರಮಾಣದಲ್ಲಿವೆ. ಆದರೆ ಇದನ್ನು ಖಾಲಿಹೊಟ್ಟೆಯಲ್ಲೆಂದೂ ತಿನ್ನಬಾರದು. ಖಾಲಿ ಹೊಟ್ಟೆಯಲ್ಲಿ ತಿಂದರೆ ಶರೀರದಲ್ಲಿ ಮ್ಯಾಗ್ನೀಷಿಯಂ ಪ್ರಮಾಣ ಹೆಚ್ಚುತ್ತದೆ. ಇದು ರಕ್ತದಲ್ಲಿ ಮ್ಯಾಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಮಟ್ಟಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ಹೃದಯದ ಸಮರ್ಪಕ ಕಾರ್ಯನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News